ಅವಕಾಶ ಸಿಕ್ಕಿದಾಗಲೆಲ್ಲ ಬ್ರಿಜ್ ಭೂಷಣ್ ನಿಂದ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ; ನ್ಯಾಯಾಲಯಕ್ಕೆ ದಿಲ್ಲಿ ಪೊಲೀಸ್
ಬ್ರಿಜ್ಭೂಷಣ್ ಶರಣ್ ಸಿಂಗ್ | Photo: PTI
ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್ನ ನಿರ್ಗಮನ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ಅವಕಾಶ ಸಿಕ್ಕಿದಾಗಲೆಲ್ಲ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದಿಲ್ಲಿ ಪೊಲೀಸರು ಶನಿವಾರ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಹೇಳಿದ್ದಾರೆ.
“ತಾನು ಏನು ಮಾಡುತ್ತಿರುವೆ ಎನ್ನುವುದು ಸಿಂಗ್ಗೆ ಗೊತ್ತಿತ್ತು ಹಾಗೂ ಅವರ ಉದ್ದೇಶ ಕುಸ್ತಿಪಟುಗಳ ಮರ್ಯಾದೆಗೆ ಧಕ್ಕೆ ತರುವುದೇ ಆಗಿತ್ತು’’ ಎಂದು ದಿಲ್ಲಿ ಪೊಲೀಸ್ ಪರವಾಗಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ರ ನ್ಯಾಯಾಲಯದಲ್ಲಿ ಹಾಜರಾದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಹೇಳಿದರು.
ಮಹಿಳಾ ಕುಸ್ತಿಪಟುವೊಬ್ಬರು ಸಲ್ಲಿಸಿದ ದೂರನ್ನು ಉಲ್ಲೇಖಿಸಿದ ಅವರು, ತಜಿಕಿಸ್ತಾನದಲ್ಲಿ ನಡೆದ ಕ್ರೀಡಾಕೂಟವೊಂದರ ವೇಳೆ, ಸಿಂಗ್ ಆ ಕುಸ್ತಿಪಟುವನ್ನು ತನ್ನ ಕೋಣೆಗೆ ಕರೆಸಿಕೊಂಡು ಬಲವಂತವಾಗಿ ತಬ್ಬಿಕೊಂಡರು ಎಂದು ಹೇಳಿದರು. ಇದನ್ನು ಕುಸ್ತಿಪಟು ಪ್ರತಿಭಟಿಸಿದಾಗ, ತಂದೆಯಂತೆ ತಾನು ಹಾಗೆ ಮಾಡಿದೆ ಎಂದು ಹೇಳಿದರು ಎಂದರು.
“ತಾನು ಏನು ಮಾಡುತ್ತಿದ್ದೇನೆ ಎನ್ನುವುದು ಅವರಿಗೆ ಸಂಪೂರ್ಣವಾಗಿ ತಿಳಿದಿತ್ತು ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ’’ ಎಂದು ದಿಲ್ಲಿ ಪೊಲೀಸರ ವಕೀಲರು ಹೇಳಿದರು.
ಉತ್ತರಪ್ರದೇಶದಿಂದ ಬಿಜೆಪಿ ಸಂಸದನೂ ಆಗಿರುವ ಸಿಂಗ್ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ಆರು ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದಾರೆ.
ಕುಸ್ತಿ ಫೆಡರೇಶನ್ನ ಅಧ್ಯಕ್ಷನ ನೆಲೆಯಲ್ಲಿ ಸಹಾಯ ಮಾಡಬೇಕಾದರೆ ಲೈಂಗಿಕ ತೃಪ್ತಿ ನೀಡಬೇಕು ಎಂಬ ಬೇಡಿಕೆಯನ್ನು ಸಿಂಗ್ ಕನಿಷ್ಠ ಎರಡು ಸಂದರ್ಭಗಳಲ್ಲಿ ಮುಂದಿಟ್ಟಿದ್ದಾರೆ ಎಂಬುದಾಗಿ ದೂರುದಾರರು ಆರೋಪಿಸಿದ್ದಾರೆ. ಅವರು ತಮಗೆ 15 ಬಾರಿ ಲೈಂಗಿಕ ಪೀಡನೆಗಳನ್ನು ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ ಪೂನಿಯ ಹಾಗೂ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಭಾರತದ ಉನ್ನತ ಕುಸ್ತಿಪಟುಗಳು ಮೊದಲ ಬಾರಿಗೆ ಜನವರಿಯಲ್ಲಿ ಸಿಂಗ್ ವಿರುದ್ಧ ಪ್ರತಿಭಟನೆ ಮಾಡಿದರು. ಮೇಲುಸ್ತುವಾರಿ ಸಮಿತಿಯು ಸಿಂಗ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ವಿಫಲವಾದಾಗ ಎಪ್ರಿಲ್ನಲ್ಲಿ ಅವರು ಪ್ರತಿಭಟನೆಯನ್ನು ಮುಂದುವರಿಸಿದರು.
ಎಪ್ರಿಲ್ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕವಷ್ಟೇ ದಿಲ್ಲಿ ಪೊಲೀಸರು ಸಿಂಗ್ ವಿರುದ್ಧ ಮೊಕದ್ದಮೆ ದಾಖಲಿಸಿದರು. ಪೊಲೀಸರು ಜೂನ್ 15ರಂದು ಸಿಂಗ್ ವಿರುದ್ಧ 1,000 ಪುಟಗಳ ಆರೋಪಪಟ್ಟಿ ಸಲ್ಲಿಸಿದರು. ಆದರೆ, ಅಪ್ತಾಪ್ತ ಕುಸ್ತಿಪಟು ಸಲ್ಲಿಸಿದ ಮೊಕದ್ದಮೆಯನ್ನು ಕೈಬಿಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಆ ಮೊಕದ್ದಮೆ ಮುಂದುವರಿದಿದ್ದರೆ ಸಿಂಗ್ರನ್ನು ಪೋಕ್ಸೊ ಕಾನೂನಿನಡಿ ತಕ್ಷಣ ಬಂಧಿಸಬೇಕಾಗುತ್ತಿತ್ತು.
ಮುಂದಿನ ವಿಚಾರಣೆ ಅಕ್ಟೋಬರ್ 7ರಂದು ನಡೆಯಲಿದೆ.