ಕುಸ್ತಿ ಒಕ್ಕೂಟದೊಂದಿಗೆ ಬ್ರಿಜ್ ಭೂಷಣ್ ಸಂಪರ್ಕ ಹೊಂದಿರುವುದರಿಂದ ಮಹಿಳಾ ಕುಸ್ತಿಪಟುಗಳು ಭಯಭೀತರಾಗಿದ್ದಾರೆ: ಅನಿತಾ ಶಿಯೋರಣ್
ಅನಿತಾ ಶಿಯೋರಣ್ - Photo : indianexpress
ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದೊಂದಿಗಿನ ಬ್ರಿಜ್ ಭೂಷಣ್ ಸಂಪರ್ಕವು ಮುಂದುವರಿಯುವುದರಿಂದ ಮಹಿಳಾ ಕುಸ್ತಿಪಟುಗಳು ಭಯಭೀತರಾಗಿದ್ದಾರೆ. ಎಲ್ಲರೂ ಅವರಿಗೇ ವಂದಿಸುತ್ತಾರೆ ಹಾಗೂ ಏಕಸ್ವಾಮ್ಯ ಮುಂದುವರಿಯುತ್ತಲೇ ಇರುತ್ತದೆ ಎಂದು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಮಾಜಿ ಕುಸ್ತಿಪಟು ಅನಿತ್ ಶಿಯೋರಣ್ ಹೇಳಿದ್ದಾರೆ.
The Indian Express ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, “ನಾನೇನಾದರೂ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷೆಯಾಗಿದ್ದರೆ, ಅದರ ಸ್ವಚ್ಛತಾ ಕಾರ್ಯ ಪ್ರಾರಂಭವಾಗುತ್ತಿತ್ತು ಹಾಗೂ ಹಲವಾರು ಹೆಣ್ಣು ಮಕ್ಕಳು ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಕುರಿತು ಮಾತನಾಡುತ್ತಿದ್ದರು. ಕುಸ್ತಿ ನನ್ನ ಎರಡನೆಯ ಕುಟುಂಬವಾಗಿದ್ದು, ಮಹಿಳಾ ಕುಸ್ತಿ ಪಟುಗಳು ಯಾವ ಬಗೆಯ ಲೈಂಗಿಕ ಕಿರುಕುಳ ಅನುಭವಿಸುತ್ತಾರೆ ಎಂಬುದು ನನಗೆ ತಿಳಿದಿದೆ” ಎಂದು ಅವರು ತಿಳಿಸಿದ್ದಾರೆ.
ನಾನು ಹಲವಾರು ಮಹಿಳಾ ಕುಸ್ತಿಪಟುಗಳನ್ನು ಭೇಟಿಯಾಗಿ ಅವರ ಮಾತುಗಳನ್ನು ಆಲಿಸಿದೆ ಹಾಗೂ ಅವರಿಗಾಗಿರುವುದು ಮತ್ಯಾರಿಗೂ ಆಗಕೂಡದು. ಈಗ ಇಡೀ ದೇಶ ಆರೋಪಿಯು ಎಲ್ಲಿದ್ದಾನೆ ಹಾಗೂ ಮಹಿಳಾ ಕುಸ್ತಿಪಟುಗಳು ಎಲ್ಲಿದ್ದಾರೆ ಎಂಬುದನ್ನು ನೋಡುತ್ತಿದ್ದಾರೆ. ಇಂದು ಮಹಿಳಾ ಕುಸ್ತಿಪಟುಗಳು ಬೀದಿಯಲ್ಲಿದ್ದಾರೆ. ಮಾಜಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹೇಗೆಂದರೆ, ಆತನೊಂದಿಗೆ ಮಾತನಾಡಲೂ ಮಹಿಳಾ ಕುಸ್ತಿಪಟುಗಳು ಹೆದರುತ್ತಿದ್ದರು ಹಾಗೂ ಆತನಿಗೆ ಕೆಟ್ಟ ಹೆಸರಿದೆ. ನಾವೇನಾದರೂ ಮಾತನಾಡಿದರೆ ನಮ್ಮ ವೃತ್ತಿ ಜೀವನವು ಅಂತ್ಯವಾಗಬಹುದು ಎಂಬ ಭೀತಿ ಮಹಿಳಾ ಕುಸ್ತಿಪಟುಗಳಲ್ಲಿ ಮನೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಸಾಕ್ಷಿಯ ವಿಡಿಯೊವನ್ನು ನೋಡಿದಾಗಲೆಲ್ಲ ನನ್ನ ಕಣ್ಣುಗಳು ಹನಿಗೂಡುತ್ತವೆ. ಒಲಿಂಪಿಕ್ ಪದಕ ವಿಜೇತೆಯೊಬ್ಬರು ಈ ಬಗೆಯಲ್ಲಿ ನಿವೃತ್ತಿಯಾಗುವುದನ್ನು ನೋಡಿದಾಗ ಹೃದಯ ಒಡೆಯುತ್ತದೆ. ಬಜರಂಗ್ ಅವರು ಒಲಿಂಪಿಕ್ಸ್ ಗಾಗಿ ಸಿದ್ಧತೆ ನಡೆಸುತ್ತಿದ್ದರಾದರೂ, ಮಹಿಳಾ ಕುಸ್ತಿಪಟುಗಳು ಸುರಕ್ಷಿತವಾಗಿರಲಿ ಎಂಬ ಕಾರಣಕ್ಕೆ ಹೋರಾಡಿದರು. ಅದೇ ರೀತಿ ವಿನೇಶ್ ಫೋಗಟ್ ಕೂಡಾ. ಅವರು ಮಹಿಳೆಯರ ಧ್ವನಿಯನ್ನು ಎತ್ತಿದರು. ಆದರೆ, ಅವರಿಂದು ಏನು ಪಡೆದಿದ್ದಾರೆ? ಅವರ ಒಂದೇ ಆಗ್ರಹವು ಭಾರತೀಯ ಕುಸ್ತಿ ಒಕ್ಕೂಟದಲ್ಲಿ ಸುಧಾರಣೆಯಾಗಬೇಕು ಹಾಗೂ ಬ್ರಿಜ್ ಭೂಷಣ್ ಬದಲಿಗೆ ಮಹಿಳೆಯೊಬ್ಬರು ಒಕ್ಕೂಟದ ಅಧ್ಯಕ್ಷರಾಗಬೇಕು ಎಂದಾಗಿತ್ತು. ಇಷ್ಟೆಲ್ಲ ವಿಚಾರಗಳನ್ನು ಪ್ರಸ್ತಾಪಿಸಿದರೂ, ಮಹಿಳಾ ಕುಸ್ತಿಪಟುಗಳಿಗೆ ದೇಶದಲ್ಲಿ ಏನೂ ದೊರೆಯಲಿಲ್ಲ ಎಂದು ಅನಿತಾ ಶಿಯೋರಣ್ ವಿಷಾದಿಸಿದ್ದಾರೆ.
ಕುಸ್ತಿ ಒಕ್ಕೂಟವು ಕುಸ್ತಿಪಟುಗಳಿಗಾಗಿ ಇದ್ದರೂ, ಆ ಒಕ್ಕೂಟದಲ್ಲೇ ಅವರ ಧ್ವನಿಯನ್ನು ಅಡಗಿಸಲಾಗಿದೆ. ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದರೂ, ಒಕ್ಕೂಟದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕುಸ್ತಿಪಟುಗಳು ಮತ್ತೇನು ಮಾಡಲು ಸಾಧ್ಯ ಎಂದೂ ಅವರು ಪ್ರಶ್ನಿಸಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟದ ಚುನಾವಣಾ ಫಲಿತಾಂಶವು ಮಹಿಳಾ ಕುಸ್ತಿಪಟುಗಳ ಧ್ವನಿಯನ್ನು ಅಡಗಿಸಿದೆ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.