ನಮ್ಮ ಪುತ್ರನನ್ನು ಮನೆಗೆ ಕರೆ ತನ್ನಿ: ಪಾಕಿಸ್ತಾನ ರೇಂಜರ್ ಗಳ ವಶದಲ್ಲಿರುವ ಬಿಎಸ್ಎಫ್ ಯೋಧನ ಕುಟುಂಬದ ಆಗ್ರಹ

ಸಾಂದರ್ಭಿಕ ಚಿತ್ರ | PTI File Photo
ಹೊಸದಿಲ್ಲಿ: “ನನ್ನ ಪತಿಯನ್ನು ಮನೆಗೆ ಕರೆ ತನ್ನಿ. ಅದಕ್ಕಾಗಿ ಯಾವ ಬೆಲೆ ತೆತ್ತಾದರೂ ಸರಿ, ಅವರನ್ನು ಮನೆಗೆ ಕರೆ ತನ್ನಿ” ಎಂದು ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ದಾಟಿ, ಪಾಕಿಸ್ತಾನದ ಸೇನೆ ವಶಕ್ಕೆ ಪಡೆದಿರುವ ಗಡಿ ಭದ್ರತಾ ಪಡೆಯ ಯೋಧ ಪೂರ್ಣಂ ಸಾಹು ಅವರ ಪತ್ನಿ ರಜನಿ ಅರ್ದ್ರವಾಗಿ ಮನವಿ ಮಾಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಮರು ದಿನವಾದ ಬುಧವಾರದಂದು ರೈತರ ಗುಂಪೊಂದಕ್ಕೆ ಬೆಂಗಾವಲು ಒದಗಿಸಿ ಕರೆದೊಯ್ಯುತ್ತಿದ್ದ ಗಡಿ ಭದ್ರತಾ ಪಡೆಯ ಪಂಜಾಬ್ ನ ಫಿರೋಝ್ ಪುರ್ ವಲಯದ 182ನೇ ತುಕಡಿಯ ಯೋಧ ಪೂರ್ಣಂ ಸಾಹು ದಣಿವಾರಿಸಿಕೊಳ್ಳಲು ಆಕಸ್ಮಿಕವಾಗಿ ಮರವೊಂದರ ಕೆಳಗೆ ವಿಶ್ರಾಂತಿ ಪಡೆದಿದ್ದಾರೆ. ಆದರೆ, ಆ ಸ್ಥಳ ಪಾಕಿಸ್ತಾನದ ಪ್ರಾಂತ್ಯಕ್ಕೆ ಸೇರಿದ್ದು ಎಂಬ ಸಂಗತಿ ಅವರಿಗೆ ತಿಳಿದಿಲ್ಲ. ಈ ವೇಳೆ ಅವರು ಸೇನಾ ಸಮವಸ್ತ್ರದಲ್ಲಿದ್ದರು ಹಾಗೂ ಅವರ ಬಳಿ ಸೇವಾ ರೈಫಲ್ ಕೂಡಾ ಇತ್ತು ಎನ್ನಲಾಗಿದೆ. ಹೀಗಾಗಿ, ಅವರನ್ನು ಪಾಕಿಸ್ತಾನ ರೇಂಜರ್ಸ್ ತಕ್ಷಣವೇ ತನ್ನ ವಶಕ್ಕೆ ಪಡೆದಿತ್ತು.
ಈ ಸುದ್ದಿ ತಿಳಿಯತ್ತಿದ್ದಂತೆಯೆ, ಪೂರ್ಣಂ ಸಾಹು ಅವರ ಎರಡು ಕೋಣೆಗಳ ಇಕ್ಕಟ್ಟಾದ ಮನೆಯಲ್ಲಿ ನೀರವ ಮೌನ ಆವರಿಸಿದೆ. ತಮ್ಮ ಪುತ್ರನನ್ನು ಪಾಕಿಸ್ತಾನದ ಸೇನೆ ವಶಕ್ಕೆ ಪಡೆದಿರುವ ಸುದ್ದಿ ತಿಳಿದು ತೀವ್ರ ಆಘಾತಕ್ಕೀಡಾಗಿರುವ ಪೂರ್ಣಂ ಸಾಹು ಅವರ ತಂದೆ ಭೋಲನಾಥ್ ಸಾಹು, “ಆತ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದ ಹಾಗೂ ಆತ ಸುರಕ್ಷಿತವಾಗಿದ್ದಾನೊ ಇಲ್ಲವೊ ಎಂಬುದು ನಮಗೆ ತಿಳಿದಿಲ್ಲ. ಆತ ಪಾಕಿಸ್ತಾನ ಸೇನೆಯ ವಶದಲ್ಲಿದ್ದಾನೆ ಎಂದು ನಮಗೆ ತಿಳಿಯಿತು” ಎಂದು ಆತಂಕ ತೋಡಿಕೊಂಡಿದ್ದಾರೆ. ಈ ವೇಳೆ, ಅವರ ಪರವಾಗಿ ಒಗ್ಗಟ್ಟು ಪ್ರದರ್ಶಿಸಲು ನೆರೆಹೊರೆಯವರೂ ಅವರ ಮನೆಯ ಮುಂದೆ ಜಮಾಯಿಸಿದ್ದರು. “ನನ್ನ ಪುತ್ರನೆಲ್ಲಿದ್ದಾನೆ? ಆತ ಸುರಕ್ಷಿತವಾಗಿದ್ದಾನೆಯೆ? ಆತ ಚೆನ್ನಾಗಿದ್ದಾನೆಯೆ? ಎಂಬುದನ್ನಷ್ಟೆ ನಾನು ತಿಳಿಯಲು ಬಯಸುತ್ತೇನೆ” ಎಂದೂ ಭೋಲನಾಥ್ ಸಾಹು ಮನವಿ ಮಾಡಿದ್ದಾರೆ.
ಪೂರ್ಣಂ ಸಾಹು ಬಿಡುಗಡೆಗಾಗಿ ಸಂಧಾನ ನಡೆಸಲು ಭಾರತ ಮತ್ತು ಪಾಕಿಸ್ತಾನ ಗಡಿ ಭದ್ರತಾ ಪಡೆಗಳು ಫ್ಲಾಗ್ ಮೀಟಿಂಗ್ ನಡೆಸಿದವು ಎಂದು ಗುರುವಾರ ರಾತ್ರಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಹೀಗಿದ್ದೂ, ಪೂರ್ಣಂ ಸಾಹು ಕುಟುಂಬ ಈವರೆಗೆ ಅವರ ಯೋಗಕ್ಷೇಮದ ಬಗ್ಗೆ ಯಾವುದೇ ಮಾಹಿತಿ ಸ್ವೀಕರಿಸಿಲ್ಲ ಎನ್ನಲಾಗಿದೆ.
“ನನ್ನ ಪುತ್ರ ರಜೆ ಮುಗಿಸಿಕೊಂಡು ಕೇವಲ ಮೂರು ವಾರಗಳ ಹಿಂದಷ್ಟೆ ಕರ್ತವ್ಯಕ್ಕೆ ಮರಳಿದ್ದ” ಎಂದೂ ಭೋಲನಾಥ್ ಸಾಹು ನಡುಗುವ ಧ್ವನಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ಈ ನಡುವೆ, ಪೂರ್ಣಂ ಸಾಹು ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿರುವ ಘಟನೆಯ ಕುರಿತು ಅವರ ಕುಟುಂಬವು ಸೇನಾ ಪ್ರಾಧಿಕಾರಗಳಿಂದ ಯಾವುದೇ ಮಾಹಿತಿ ಸ್ವೀಕರಿಸಿಲ್ಲ. ಬದಲಿಗೆ ಪೂರ್ಣಂ ಸಾಹು ಅವರ ಸಹೋದ್ಯೋಗಿಯೊಬ್ಬರು ಈ ಕುರಿತು ಅವರಿಗೆ ಫೋನ್ ಕರೆ ಮಾಡಿ ತಿಳಿಸಿದ್ದಾರೆ. “ನನ್ನ ಪತಿಯ ಸಹೋದ್ಯೋಗಿಯೊಬ್ಬರು ಬುಧವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಕರೆ ಮಾಡಿ, ನಡೆದಿರುವ ಘಟನೆಯನ್ನು ತಿಳಿಸಿದರು. ಅಲ್ಲಿಂದ ಇಲ್ಲಿಯವರೆಗೆ ನಮಗೆ ನಿದ್ದೆ ಮಾಡಲಾಗಿಲ್ಲ. ಅವರು ನಮಗೆ ಬೇಕು” ಎಂದು ಪೂರ್ಣಂ ಸಾಹು ಅವರ ಪತ್ನಿ ರಜನಿ ಆಗ್ರಹಿಸಿದ್ದಾರೆ.
ಈ ನಡುವೆ, “ಇಂತಹ ಆಕಸ್ಮಿಕ ಗಡಿ ದಾಟುವಿಕೆ ಘಟನೆಗಳು ಸಾಮಾನ್ಯವಾಗಿದ್ದು, ಇಂತಹ ಘಟನೆಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಲಾಗುತ್ತದೆ” ಎಂದು ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಇದಕ್ಕಿಂತ ಘೋರ ಘಟನೆ ನಡೆದಿರಬಹುದು ಎಂದು ಪೂರ್ಣಂ ಸಾಹು ಅವರ ಕುಟುಂಬ ಕಳವಳಕ್ಕೀಡಾಗಿದೆ.
ಮಂಗಳವಾರ (ಎಪ್ರಿಲ್ 22) ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ ಉಭಯ ದೇಶಗಳ ನಡುವಿನ ಪ್ರಕ್ಷುಬ್ಧತೆ ಬಿಗಡಾಯಿಸಿರುವ ಹೊತ್ತಿನಲ್ಲೇ ಈ ಘಟನೆ ಕೂಡಾ ನಡೆದಿರುವುದು, ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬೆನ್ನಿಗೇ, ದೇಶಾದ್ಯಂತ ಕೋಮು ತ್ವೇಷೆಯ ವಾತಾವರಣ ನಿರ್ಮಾಣವಾಗಿದೆ.