ಆ.18ರೊಳಗೆ ನೇತಾಜಿ ಪಾರ್ಥಿವ ಅವಶೇಷ ಭಾರತಕ್ಕೆ ತನ್ನಿ : ನೇತಾಜಿ ಸೋದರ ಮೊಮ್ಮಗ ಚಂದ್ರಕುಮಾರ್ ಆಗ್ರಹ
ಚಂದ್ರ ಕುಮಾರ್ ಬೋಸ್ | PTI
ಕೋಲ್ಕತಾ : ಜಪಾನ್ನ ರೆಂಕೋಜಿಯಲ್ಲಿ ಇರಿಸಲಾಗಿರುವ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಶ್ಚಂದ್ರ ಭೋಸ್ ರ ಪಾರ್ಥಿವಶರೀರದ ಅವಶೇಷಗಳನ್ನು ಆಗಸ್ಟ್ 18ರೊಳಗೆ ಭಾರತಕ್ಕೆ ತರಬೇಕೆಂದು ಅವರ ಸೋದರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ರವಿವಾರ ಆಗ್ರಹಿಸಿದ್ದಾರೆ.
ಆದರೆ ಈ ವಿಷಯದ ಕುರಿತ ಅಂತಿಮ ಹೇಳಿಕೆಯು ಕೇಂದ್ರ ಸರಕಾರದಿಂದಲೇ ಬರಬೇಕಾಗಿದೆ. ಹೀಗೆ ಮಾಡುವುದರಿಂದ ನೇತಾಜಿ ಕುರಿತು ಹರಿದಾಡುತ್ತಿರುವ ಸುಳ್ಳು ವ್ಯಾಖ್ಯಾನಗಳು ಅಂತ್ಯ ಕಾಣಲಿವೆ ಎಂದು ಅವರು ಹೇಳಿದ್ದಾರೆ.
ನೇತಾಜಿ ಸುಭಾಶ್ಚಂದ್ರ ಭೋಸ್ಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸುವ ಉಪಕ್ರಮವನ್ನು ಎನ್ಡಿಎ ಸರಕಾರವು ಆರಂಭಿಸಿರುವುದನ್ನು ಚಂದ್ರ ಕುಮಾರ್ ಶ್ಲಾಘಿಸಿದರು.
ಎಲ್ಲಾ ‘10 ತನಿಖೆಗಳು- ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ’ ಕಡತಗಳನ್ನು ಬಿಡುಗಡೆಗೊಳಿಸಿದ ಬಳಿಕ 1945ರ ಆಗಸ್ಟ್ 18ರಂದು ತೈವಾನ್ನಲ್ಲಿ ಸಂಭವಿಸಿದ ವಿಮಾನ ಅವಘಡದಲ್ಲಿ ನೇತಾಜಿ ಸಾವನ್ನಪ್ಪಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
2024ರ ಆಗಸ್ಟ್ 18ರೊಳಗೆ ಜಪಾನ್ನ ರೆಂಕೋಜಿಯಲ್ಲಿರುವ ನೇತಾಜಿಯ ಪಾರ್ಥಿವ ಶರೀರದ ಅವಶೇಷಗಳನ್ನು ಭಾರತಕ್ಕೆ ತರಬೇಕೆಂದು ತಾನು ಕೇಂದ್ರ ಸರಕಾರವನ್ನು ವಿನಮ್ರವಾಗಿ ಕೋರುವುದಾಗಿ ಚಂದ್ರಕುಮಾರ್ ತಿಳಿಸಿದರು.
ಸ್ವಾತಂತ್ರ್ಯ ದೊರೆತ ಬಳಿಕ ನೇತಾಜಿ ಅವರು ಭಾರತಕ್ಕೆ ವಾಪಸಾಗಲು ಬಯಸಿದ್ದರು. ಆದರೆ ವಿಮಾನ ಅವಘಡದಲ್ಲಿ ಅವರು ಮೃತಪಟ್ಟಿದ್ದರಿಂದ ಅದು ಸಾಧ್ಯವಾಗಲಿಲ್ಲ ಎಂದು ಚಂದ್ರಕುಮಾರ್ ವಿಷಾದಿಸಿದರು. ಜಪಾನ್ ನ ರೇಂಕೋಜಿ ದೇವಾಲಯದಲ್ಲಿ ನೇತಾಜಿಯವರ ಪಾರ್ಥಿವ ಶರೀರದ ಅವಶೇಷಗಳನ್ನು ಇರಿಸಿರುವುದು ಅತ್ಯಂತ ಅಪಮಾನಕಾರಿ ಎಂದು ಬೋಸ್ ಹೇಳಿದರು.
ಭಾರತದ ವಿಮೋಚಕನನ್ನು ಗೌರವಿಸಲು ಅವರ ಶರೀರದ ಅವಶೇಷಗಳು ಭಾರತದ ನೆಲವನ್ನು ಸ್ಪರ್ಶಿಸಬೇಕಾಗಿದೆ ಎಂರು. ನೇತಾಜಿಯವರ ಪುತ್ರಿ ಅನಿತಾ ಬೋಸ್ ಫಾಫ್ ಅವರು ತನ್ನ ತಂದೆಯ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಲು ಬಯಸಿದ್ದಾರೆಂದು ಚಂದ್ರಕುಮಾರ್ ತಿಳಿಸಿದರು.