ಪ್ರಸಾರ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟು ಮಾಡಬಹುದು, ಕೇಂದ್ರವು ಗೊಂದಲಗಳನ್ನು ನಿವಾರಿಸಬೇಕು: ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಆಗ್ರಹ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆನ್ಲೈನ್ ವಿಷಯ ರಚನೆಕಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕರಡು ಪ್ರಸಾರ ಸೇವೆಗಳ ಮಸೂದೆ ಕುರಿತು ಉಂಟಾಗಿರುವ ಕಳವಳಗಳನ್ನು ಕೇಂದ್ರ ಸರಕಾರವು ಪರಿಹರಿಸಬೇಕು ಎಂದು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಗುರುವಾರ ದಿಲ್ಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು, ಪ್ರಸ್ತಾವಿತ ಕಾನೂನಿನ ಕುರಿತು ವ್ಯಾಪಕ ಸಮಾಲೋಚನೆ ನಡೆಸುವಂತೆ ಮತ್ತು ಕರಡು ಮಸೂದೆಯನ್ನು ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಹಾಗೂ ನಾಗರಿಕ ಸಮಾಜ ಗುಂಪುಗಳೊಂದಿಗೆ ಹಂಚಿಕೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದರು.
ಕರಡು ಪ್ರಸಾರ ಸೇವೆಗಳ (ನಿಯಂತ್ರಣ)ಮಸೂದೆಯು ಭಾರತದ ಪ್ರಸಾರ ಕ್ಷೇತ್ರಕ್ಕಾಗಿ ಏಕೀಕೃತ ಕಾನೂನು ಚೌಕಟ್ಟನ್ನು ರೂಪಿಸಲು ಉದ್ದೇಶಿಸಿದೆ ಮತ್ತು ಅಗ್ರಮಾಧ್ಯಮ ಸಂಸ್ಥೆಗಳು ಹಾಗೂ ಡಿಜಿಟಲ್ ಸುದ್ದಿ ವೇದಿಕೆಗಳನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಳ್ಳಲಿದೆ.
ಸರಕಾರವು ಮಸೂದೆಯನ್ನು ಇನ್ನೂ ಬಹಿರಂಗಗೊಳಿಸಿಲ್ಲ,ಆಯ್ದ ಕೆಲವು ಸಂಬಂಧಿಸಿದವರೊಂದಿಗೆ ಮಾತ್ರ ಅದನ್ನು ಹಂಚಿಕೊಂಡಿದೆ.
ಮಾಧ್ಯಮಗಳಲ್ಲಿ ವರದಿಯಾಗಿರುವ ಮಸೂದೆಯ ವಿವರಗಳ ಪ್ರಕಾರ ಪ್ರಸ್ತಾವಿತ ಕಾನೂನು ಡಿಜಿಟಲ್ ಪತ್ರಕರ್ತರಿಗೆ ಮಾತ್ರವಲ್ಲ,ಆನ್ಲೈನ್ ವಿಷಯ ರಚನೆಕಾರರಿಗೂ ಅನ್ವಯಿಸುತ್ತದೆ. ಇಂತಹ ರಚನೆಕಾರರು ಸೂಚಿತ ನಿಯಮಗಳಿಗೆ ಬದ್ಧರಾಗಿರಬೇಕಾಗುತ್ತದೆ ಮತ್ತು ಇದು ಅವರು ಕಾರ್ಯ ನಿರ್ವಹಿಸುವುದನ್ನು ಅಸಾಧ್ಯವಾಗಿಸುತ್ತದೆ. ಅವರು ಸರಕಾರದ ಅನುಮತಿಯೊಂದಿಗೆ ಮಾತ್ರ ಕಾರ್ಯ ನಿರ್ವಹಿಸಬಹುದು ಮತ್ತು ಅನುಮತಿಯನ್ನು ಯಾವ ಆಧಾರದಲ್ಲಿ ನೀಡಬೇಕು ಎನ್ನುವುದನ್ನು ಸರಕಾರವು ನಿರ್ಧರಿಸುತ್ತದೆ ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಷನ್ನ ಸಹಸ್ಥಾಪಕ,ನ್ಯಾಯವಾದಿ ಅಪಾರ ಗುಪ್ತಾ ಹೇಳಿದರು.
ಮಸೂದೆಯ ಪ್ರತಿಯನ್ನು ಹಂಚಿಕೊಂಡಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಸರಕಾರವನ್ನು ಆಗ್ರಹಿಸಿದ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು,ಯಾವುದೇ ಅಧಿಕೃತ ಹೇಳಿಕೆಯ ಅನುಪಸ್ಥಿತಿಯಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಮಸೂದೆಯಲ್ಲಿನ ವಿಷಯಗಳ ಕುರಿತು ಮಾಧ್ಯಮ ವರದಿಗಳು ನಿಖರವಾಗಿವೆ ಎಂದು ನಂಬಬೇಕಾಗುತ್ತದೆ ಎಂದು ಹೇಳಿದರು.
ಈ ನಿಬಂಧನೆಗಳನ್ನು ನೋಡಿದರೆ ಸರಕಾರವು ಪ್ರತಿ ಜಿಲ್ಲೆಯಲ್ಲಿ ಯುಟ್ಯೂಬರ್ಗಳಿಗಾಗಿ ಜೈಲುಗಳನ್ನು ನಿರ್ಮಿಸಬೇಕಾಗುತ್ತದೆ ಮತ್ತು ಎಲ್ಲ ಯುಟ್ಯೂಬರ್ಗಳು ತಮ್ಮ ಮನೆಗಳಲ್ಲಿ ಪೋಲಿಸ್ ಠಾಣೆಗಳನ್ನು ಸ್ಥಾಪಿಸಬೇಕಾಗುತ್ತದೆ ಎಂದೂ ಕುಮಾರ ಹೇಳಿದರು.
ಪ್ರಸಾರ ಮಸೂದೆಯನ್ನು ಮಾಹಿತಿ ತಂತ್ರಜ್ಞಾನ ನಿಯಮಗಳು, ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯ್ದೆ, ದೂರಸಂಪರ್ಕ ಮಸೂದೆ ಮತ್ತು ನೂತನ ಕ್ರಿಮಿನಲ್ ಕಾಯ್ದೆಗಳಂತಹ ಇತ್ತೀಚಿನ ನೀತಿಗಳು ಮತ್ತು ಕಾನೂನುಗಳ ಹಿನ್ನೆಲೆಯಲ್ಲಿ ನೋಡಬೇಕು. ದೇಶದಲ್ಲಿ ಕಂಟೆಂಟ್ಗಳನ್ನು ನಿಯಂತ್ರಣ,ಕಣ್ಗಾವಲು ಮತ್ತು ಸೆನ್ಸಾರ್ಗೆ ಒಳಪಡಿಸಲು 2021ರ ಐಟಿ ನಿಯಮಗಳಿಂದ ಆರಂಭಗೊಂಡ ಬಹು-ಹಂತಗಳ ಕಾನೂನು ವ್ಯವಸ್ಥೆಯ ರಚನೆಯಲ್ಲಿ ಪ್ರಸಾರ ಮಸೂದೆಯು ಇನ್ನೊಂದು ಹೆಜ್ಜೆಯಾಗಿದೆ ಎಂದು ಕಾರವಾನ್ ಸಂಪಾದಕ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷ ಅನಂತನಾಥ ಹೇಳಿದರು.
ಮಾಧ್ಯಮಗಳು ವರದಿ ಮಾಡಿರುವ ಮಸೂದೆಯ ವಿವರಗಳು ಪ್ರಸ್ತಾವಿತ ಕಾನೂನು ಆನ್ಲೈನ್ ಸ್ಟ್ರೀಮಿಂಗ್ ಸೇವೆಗಳು,ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಆನ್ಲೈನ್ ವೀಡಿಯೊ ನಿರ್ಮಾಪಕರನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಳ್ಳಲಿದೆ ಎಂದು ಸೂಚಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ನಿಯಮಿತವಾಗಿ ವೀಡಿಯೊಗಳನ್ನು ಅಪ್ಲೋಡ್ ಮಾಡುವ ವ್ಯಕ್ತಿಗಳನ್ನು ಮಸೂದೆಯಡಿ ಡಿಜಿಟಲ್ ಸುದ್ದಿ ಪ್ರಸಾರಕರು ಎಂದು ವರ್ಗೀಕರಿಸಬಹುದು.