ಕಂಚಿನ ಪದಕ ವಿಜೇತ ಅಮನ್ ಸೆಹ್ರಾವತ್ ಗೆ ದಿಲ್ಲಿಯಲ್ಲಿ ಅದ್ದೂರಿ ಸ್ವಾಗತ

ಅಮನ್ ಸೆಹ್ರಾವತ್ | PC : PTI
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತ ಭಾರತೀಯ ಕುಸ್ತಿಪಟು ಅಮನ್ ಸೆಹ್ರಾವತ್ ಗೆ ಮಂಗಳವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಇದೇ ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿರುವ ಹರ್ಯಾಣದ ಕುಸ್ತಿಪಟು ಅಮನ್ ಅವರು ಪೋರ್ಟೊ ರಿಕೊದ ಡೇರಿಯನ್ ಕ್ರೂಝ್ ವಿರುದ್ಧ 13-5 ಅಂತರದಿಂದ ಜಯ ಸಾಧಿಸಿ ಕಂಚಿನ ಪದಕ ಜಯಿಸಿದ್ದರು.
ಟರ್ಮಿನಲ್ 3ರಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಜನರು 21ರ ಹರೆಯದ ಕ್ರೀಡಾಪಟುವನ್ನು ಆತ್ಮೀಯವಾಗಿ ಸ್ವಾಗತಿಸಿದರು.
ರವಿವಾರ ಪ್ಯಾರಿಸ್ ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಭಾರತ ಪದಕ ಪಟ್ಟಿಯಲ್ಲಿ 71ನೇ ಸ್ಥಾನ ಪಡೆದಿದೆ. ಒಟ್ಟು 126 ಪದಕಗಳನ್ನು ಜಯಿಸಿದ್ದ ಅಮೆರಿಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿತ್ತು.
ದೇಶಕ್ಕಾಗಿ ಪದಕ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅಮನ್ ಸೆಹ್ರಾವತ್, ನನಗೆ ತುಂಬಾ ಸಂತೋಷವಾಗಿದೆ. ಒಲಿಂಪಿಕ್ಸ್ನಲ್ಲಿ ದೇಶಕ್ಕಾಗಿ ಪದಕ ಗೆದ್ದಿದ್ದೇನೆಂದು ನನಗೆ ಈಗಲೂ ನಂಬಲಾಗುತ್ತಿಲ್ಲ. ನನಗೆ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿತ್ತು ಆದರೆ ಕಂಚಿನ ಪದಕ ಗೆದ್ದಿರುವುದಕ್ಕೆ ಖುಷಿ ಇದೆ ಎಂದು ಹೇಳಿದ್ದಾರೆ.
ಒಲಿಂಪಿಕ್ಸ್ ಪೋಡಿಯಮ್ನಲ್ಲಿ ನಿಂತ ಅನುಭವವನ್ನು ವಿವರಿಸಿದ ಸೆಹ್ರಾವತ್, ನಾನು ಪೋಡಿಯಮ್ ಮೇಲೆ ನಿಂತಾಗ ಅದೊಂದು ವರ್ಣಿಸಲಾಗದ ಕ್ಷಣವಾಗಿತ್ತು. ಇಂದಿನಿಂದ ನನ್ನ ಮುಂದಿನ ಗುರಿ 2028ರ ಒಲಿಂಪಿಕ್ಸ್ ಹಾಗೂ 2026ರ ಏಶ್ಯನ್ ಗೇಮ್ಸ್ಗೆ ಸಜ್ಜಾಗುವುದು ಎಂದು ಸೆಹ್ರಾವತ್ ಹೇಳಿದ್ದಾರೆ.