ಜಮ್ಮು| ಪಾಕ್ನಿಂದ ಅಪ್ರಚೋದಿತ ಗುಂಡಿನ ದಾಳಿ: ಬಿಎಸ್ಎಫ್ ಜವಾನ, 4 ನಾಗರಿಕರಿಗೆ ಗಾಯ
ಸಾಂದರ್ಭಿಕ ಚಿತ್ರ (PTI)
ಜಮ್ಮು: ಗುರುವಾರ ರಾತ್ರಿ ಜಮ್ಮುವಿನ ಅರ್ನಿಯಾ ಮತ್ತು ಆರ್ ಎಸ್ ಪುರ ಸೆಕ್ಟರ್ಗಳಲ್ಲಿ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಐದು ಭಾರತೀಯ ಪೋಸ್ಟ್ಗಳ ಮೇಲೆ ಪಾಕಿಸ್ತಾನಿ ರೇಂಜರ್ಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಓರ್ವ ಗಡಿ ಭದ್ರತಾ ಪಡೆ ಜವಾನ ಮತ್ತು ನಾಲ್ಕು ನಾಗರಿಕರು ಗಾಯಗೊಂಡಿದ್ದಾರೆ.
ಅರ್ನಿಯಾ ಸೆಕ್ಟರ್ನಲ್ಲಿ ಸುಮಾರು 8 ಗಂಟೆಗೆ ಗುಂಡಿನ ದಾಳಿ ಆರಂಭಗೊಂಡಾಗ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಹಾಗೂ ಭಾರತದ ಕಡೆಯಿಂದಲೂ ಅದಕ್ಕೆ ಪ್ರತಿ ದಾಳಿ ನಡೆಸಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿಯಲ್ಲಿ ಪಾಕ್ ಕಡೆಯವರಿಗೂ ಗಾಯಗಳುಂಟಾಗಿವೆಯೇ ಎಂಬ ಕುರಿತು ತಿಳಿದು ಬಂದಿಲ್ಲ.
ಮೂಲಗಳ ಪ್ರಕಾರ ವಸತಿ ಪ್ರದೇಶಗಳ ಮೇಲೆ ಕೂಡ ಶೆಲ್ ದಾಳಿಯನ್ನು ಪಾಕ್ ರೇಂಜರ್ಗಳು ನಡೆಸಿದ್ದರು. ಅರ್ನಿಯಾ ಮತ್ತು ಜಬೋವಲ್ನಲ್ಲಿ ವಲಸಿಗ ಕಾರ್ಮಿಕರು ತಮ್ಮ ಮನೆಗಳಿಂದ ಸುರಕ್ಷಿತ ಸ್ಥಳಗಳಿಗೆ ಓಡುತ್ತಿರುವುದು ಕಂಡು ಬಂತು ಎಂದು ಮೂಲಗಳು ತಿಳಿಸಿವೆ.
ಗಡಿ ಭಾಗದ ಗ್ರಾಮಗಳು ಹಲವು ನಿವಾಸಿಗಳು ಬಂಕರ್ಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಇಂತಹ ಒಂದು ಡಜನಿಗೂ ಅಧಿಕ ಕದನವಿರಾಮ ಉಲ್ಲಂಘನೆಗಳು ಕಳೆದೆರಡು ವರ್ಷಗಳಲ್ಲಿ ನಡೆದಿವೆ.