ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ
ಮಾಯಾವತಿ | Photo: PTI
ಲಕ್ನೋ : ಲೋಕಸಭಾ ಚುನಾವಣೆಯಲಿ ಬಿಎಸ್ಪಿಯು ತೃತೀಯ ರಂಗವನ್ನು ರಚಿಸಲಿದೆಯೆಂಬ ಸುಳ್ಳು ವದಂತಿಗಳನ್ನು ಕೆಲವು ಪ್ರತಿಪಕ್ಷಗಳು ಹರಡುತ್ತಿವೆಯೆಂದು ಪಕ್ಷದ ವರಿಷ್ಠೆ ಮಾಯಾವತಿ ಶನಿವಾರ ಆಪಾದಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತನ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆಯೆಂದು ಅವರು ಹೇಳಿದ್ದಾರೆ.
‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಬಿಎಸ್ಪಿಯು ಲೋಕಸಭಾ ಚುನಾವಣೆಗೆ ಸಂಪೂರ್ಣ ಸಜ್ಡಾಗಿದ್ದು, ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
‘‘ ಬಿಎಸ್ಪಿಯು ಚುನಾವಣಾ ಮೈತ್ರಿಕೂಟ ಅಥವಾ ತೃತೀಯ ರಂಗವನ್ನು ರಚಿಸಲಿದೆ ಎಂಬತ ವದಂತಿಗಳು ಸುಳ್ಳು. ಮಾಧ್ಯಮಗಳು ಇಂತಹ ವರದಿಗಳನ್ನು ಪ್ರಕಟಿಸಕೂಡದು ಹಾಗೂ ಜನತೆ ಈ ಬಗ್ಗೆ ಎಚ್ಚರದಿಂದಿರಬೇಕು’’ ಎಂದು ಅವರು ಹೇಳಿದ್ದಾರೆ.
ಬಿಎಸ್ಪಿಯು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿರುವುದರಿಂದಾಗಿ ಕೆಲವು ಪಕ್ಷಗಳು ಚಡಪಡಿಸುತ್ತಿವೆ ಎಂದರು. ಪ್ರತಿ ದಿನವೂ ವಿವಿಧ ರೀತಿಯ ವದಂತಿಗಳನ್ನು ಹರಡುವ ಮೂಲಕ ಕೆಲವು ಪಕ್ಷಗಳು ಜನರನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಿಎಸ್ಪಿಯ ನಿರ್ಧಾರವು ದೃಢವಾದುದಾಗಿದೆ’’ ಎಂದು ಮಾಯಾವತಿ ಹೇಳಿದರು.