ಹರ್ಯಾಣ: ಬಿಎಸ್ಪಿ ನಾಯಕನ ಗುಂಡಿಕ್ಕಿ ಹತ್ಯೆ

ಹರ್ಬಿಲಾಸ್ ಸಿಂಗ್ ರಜ್ಜುಮಾಜ್ರ (Photo: X/@AbhaySChautala)
ಅಂಬಾಲ: ಹರ್ಯಾಣದ ಅಂಬಾಲದಲ್ಲಿನ ಬಿಎಸ್ಪಿ ನಾಯಕರೊಬ್ಬರನ್ನು ಇಲ್ಲಿನ ನಾರಾಯಣ್ ಗಢದಲ್ಲಿ ಸಶಸ್ತ್ರ ಹಂತಕರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತ ಬಿಎಸ್ಪಿ ನಾಯಕನನ್ನು ಹರ್ಬಿಲಾಸ್ ಸಿಂಗ್ ರಜ್ಜುಮಾಜ್ರ ಎಂದು ಗುರುತಿಸಲಾಗಿದ್ದು, ಅವರು ತಮ್ಮಿಬ್ಬರು ಸ್ನೇಹಿತರಾದ ಪುನೀತ್ ಹಾಗೂ ಗುಗಲ್ ರೊಂದಿಗೆ ಕಾರಿನಲ್ಲಿದ್ದಾಗ ಈ ದಾಳಿ ನಡೆದಿದೆ. ಪುನೀತ್ ಕೂಡಾ ಗುಂಡೇಟಿನಿಂದ ಗಾಯಗೊಂಡಿದ್ದಾರೆ.
ಈ ದಾಳಿಯ ನಂತರ, ಅವರನ್ನು ಚಂಡೀಗಢದ ಪಿಜಿಐಎಂಇಆರ್ ಸಾಗಿಸಲಾಯಿತಾದರೂ, ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಹರ್ಬಿಲಾಸ್ ಸಿಂಗ್ ರಜ್ಜುಮಾಜ್ರ ಮೃತಪಟ್ಟಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಪುನೀತ್ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ದಾಳಿಕೋರರನ್ನು ಇದುವರೆಗೂ ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ನಾರಾಯಣ ಗಢ ಪೊಲೀಸ್ ಠಾಣೆಯ ಠಾಣಾಧಿಕಾರಿ ಲಲಿತ್ ಕುಮಾರ್ ತಲುಪಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ. ಹಂತಕರನ್ನು ಸೆರೆ ಹಿಡಿಯಲು ಪೊಲೀಸ್ ತಂಡವೊಂದನ್ನು ರಚಿಸಲಾಗಿದೆ ಎಂದು ಅಂಬಾಲ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಸ್.ಭೋರಿಯ ಹೇಳಿದ್ದಾರೆ.