ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಿದ ಬಿಎಸ್ಪಿ ಲೋಕಸಭಾ ಸದಸ್ಯ ದಾನಿಶ್ ಅಲಿ
ದಾನಿಶ್ ಅಲಿ | Photo: PTI
ಇಂಫಾಲ : ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ ಸದಸ್ಯ ದಾನಿಶ್ ಅಲಿ ಜನವರಿ 14 ರಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಲು ಮಣಿಪುರಕ್ಕೆ ತೆರಳಿದ್ದಾರೆ ಎಂದು thehindu.com ವರದಿ ಮಾಡಿದೆ.
“ಇಂದು, ನಾನು ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸೇರಲು ನಿರ್ಧರಿಸಿದ್ದೇನೆ. ಇದು ನನಗೆ ಬಹಳ ಮುಖ್ಯವಾದ ಕ್ಷಣ. ಬಹಳಷ್ಟು ಯೋಚಿಸಿ ನಾನು ಇಲ್ಲಿಗೆ ಬಂದಿದ್ದೇನೆ. ದೇಶದಲ್ಲಿ ಸೃಷ್ಟಿಯಾಗಿರುವ ವಾತಾವರಣದಲ್ಲಿ ನನಗೆ ಎರಡು ಆಯ್ಕೆಗಳಿದ್ದವು. ಒಂದೋ ಯಥಾಸ್ಥಿತಿಯನ್ನು ಒಪ್ಪಿಕೊಂಡು ದಲಿತರು, ಹಿಂದುಳಿದವರು, ಬುಡಕಟ್ಟುಗಳು, ಅಲ್ಪಸಂಖ್ಯಾತರು ಮತ್ತು ಇತರ ಅಂಚಿನಲ್ಲಿರುವ ಮತ್ತು ಬಡ ವರ್ಗಗಳ ಶೋಷಣೆಯನ್ನು ನಿರ್ಲಕ್ಷಿಸುವುದು ಅಥವಾ ದೇಶದಲ್ಲಿ ಭಯ, ದ್ವೇಷ, ಶೋಷಣೆ ಮತ್ತು ಆಳವಾಗುತ್ತಿರುವ ವಿಭಜನೆಯ ವಾತಾವರಣದ ವಿರುದ್ಧ ಅಭಿಯಾನ ನಡೆಸುವುದು. ನನ್ನ ಆತ್ಮಸಾಕ್ಷಿಯು ಎರಡನೇ ಆಯ್ಕೆಯನ್ನು ಒಪ್ಪುವಂತೆ ಹೇಳಿತು”, ಎಂದು ದಾನಿಶ್ ಅಲಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಈ ನಿರ್ಧಾರವನ್ನು ನಾನು ಸ್ವಾಭಾವಿಕವಾಗಿ ತೆಗೆದುಕೊಂಡೆ. ಏಕೆಂದರೆ ಸಂಸತ್ತಿನಲ್ಲಿ ನಾನು ಇದೇ ರೀತಿಯ ದಾಳಿಯನ್ನು ಎದುರಿಸಿದ್ದೇನೆ. ಅಲ್ಲಿ ಆಡಳಿತ ಪಕ್ಷದ ಸದಸ್ಯರು ನನ್ನ ಮತ್ತು ನನ್ನ ಧರ್ಮದ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ", ಎಂದು ಅವರು ಹೇಳಿದರು.
ಹಿಂಸಾಚಾರ ಪೀಡಿತ ಮಣಿಪುರದಿಂದ ರಾಹುಲ್ ಗಾಂಧಿಯವರು ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ರವಿವಾರ ಪ್ರಾರಂಭಿಸಿದ್ದಾರೆ. ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ನಿರುದ್ಯೋಗ, ಬೆಲೆ ಏರಿಕೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಗಮನ ಸೆಳೆಯಲು ಕಾಂಗ್ರೆಸ್ ಪಕ್ಷವು ಈ ಯಾತ್ರೆಯನ್ನು ಬಳಸಿಕೊಳ್ಳಲಿದೆ.
ಭಾರತ್ ಜೋಡೋ ನ್ಯಾಯ್ ಯಾತ್ರೆಯು 15 ರಾಜ್ಯಗಳಲ್ಲಿ 100 ಲೋಕಸಭಾ ಕ್ಷೇತ್ರಗಳ ಮೂಲಕ ಸಂಚರಿಸಲಿದೆ. ಇದು ರಾಹುಲ್ ಗಾಂಧಿಯವರು ಈ ಹಿಂದೆ ಮಾಡಿದ್ದ ಭಾರತ್ ಜೋಡೋ ಯಾತ್ರೆಯಂತೆ ಪರಿಣಾಮ ಬೀರಲಿದೆ ಎಂಬ ನಂಬಿಕೆ ಕಾಂಗ್ರೆಸ್ ಪಕ್ಷಕ್ಕಿದೆ.