ಬಜೆಟ್ 2024-25 : ಬಂಡವಾಳ ವೆಚ್ಚ ಗುರಿ 11.11 ಲಕ್ಷ ಕೋಟಿ ರೂ.ಗೆ ಏರಿಕೆ
ನಿರ್ಮಲಾ ಸೀತಾರಾಮನ್ | Photo: PTI
ಹೊಸದಿಲ್ಲಿ: ಕೇಂದ್ರ ಸರಕಾರವು 2024-25ನೇ ವಿತ್ತವರ್ಷಕ್ಕಾಗಿ ಬಂಡವಾಳ ವೆಚ್ಚ ಗುರಿಯನ್ನು ಶೇ.11.1ರಷ್ಟು ಅಂದರೆ,11.11 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲು ಉದ್ದೇಶಿಸಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಪ್ರಕಟಿಸಿದರು.
ಬಂಡವಾಳ ವೆಚ್ಚವು ರಸ್ತೆಗಳು, ಶಾಲೆಗಳು ಮತ್ತು ಆಸ್ಪತ್ರೆಗಳಂತಹ ಆಸ್ತಿಗಳ ನಿರ್ಮಾಣಕ್ಕಾಗಿ ಸರಕಾರವು ವ್ಯಯಿಸುವ ಮೊತ್ತವಾಗಿದೆ.
ವಿತ್ತವರ್ಷಕ್ಕೆ ಬಂಡವಾಳ ವೆಚ್ಚವು ಜಿಡಿಪಿಯ ಶೇ.3.4ರಷ್ಟು ಆಗಿರಲಿದೆ ಎಂದು ತನ್ನ ಬಜೆಟ್ ಭಾಷಣದಲ್ಲಿ ಸೀತಾರಾಮನ್ ತಿಳಿಸಿದರು.
2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಬಂಡವಾಳ ವೆಚ್ಚಕ್ಕಾಗಿ 10 ಲಕ್ಷ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು,ಅದು ಹಿಂದಿನ ವರ್ಷದ ಹಂಚಿಕೆಗಿಂತ ಶೇ.33ರಷ್ಟು ಅಧಿಕವಾಗಿತ್ತು.
ಮುಂಬರುವ ವಿತ್ತವರ್ಷಕ್ಕಾಗಿ ಸರಕಾರವು ಶೇ.5.1ರಷ್ಟು ವಿತ್ತೀಯ ಕೊರತೆಯ ಗುರಿಯನ್ನು ಹೊಂದಿದೆ.
‘ನನ್ನ 2021-22ನೇ ಸಾಲಿನ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದಂತೆ 2025-26ನೇ ವಿತ್ತವರ್ಷಕ್ಕೆ ವಿತ್ತೀಯ ಕೊರತೆಯನ್ನು ಶೇ.4.5ಕ್ಕಿಂತ ಕೆಳಕ್ಕೆ ತರಲು ನಾವು ವಿತ್ತೀಯ ಬಲವರ್ಧನೆಯ ಪಥದಲ್ಲಿ ಮುಂದುವರಿಯುತ್ತಿದ್ದೇವೆ ’ಎಂದು ಸೀತಾರಾಮನ್ ತಿಳಿಸಿದರು.
ವಿತ್ತೀಯ ಕೊರತೆಯು ಸರಕಾರದ ಆದಾಯ ಮತ್ತು ವೆಚ್ಚದ ನಡುವಿನ ವ್ಯತ್ಯಾಸವಾಗಿದೆ.
2023-24ನೇ ಸಾಲಿಗೆ ಪರಿಷ್ಕೃತ ವಿತ್ತೀಯ ಕೊರತೆ ಶೇ.5.8ರಷ್ಟಿದೆ.
ಆದಾಯ ತೆರಿಗೆ ಹಂತಗಳಲ್ಲಿ ಯಾವುದೇ ಬದಲಾವಣೆಗಳನ್ನು ವಿತ್ತಸಚಿವೆ ಪ್ರಕಟಿಸಲಿಲ್ಲಕ್ಷ
ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಸಂಗ್ರಹಗಳು ಮೂರು ಪಟ್ಟಿಗಿಂತಲೂ ಹೆಚ್ಚಾಗಿವೆ ಮತ್ತು ತೆರಿಗೆದಾರರ ಸಂಖ್ಯೆ 2.4 ಪಟ್ಟಿನಷ್ಟು ಏರಿಕೆಯಾಗಿದೆ ಎಂದು ತಿಳಿಸಿದ ಸೀತಾರಾಮನ್, ‘ತೆರಿಗೆದಾತರ ಹಣವನ್ನು ದೇಶದ ಅಭಿವೃದ್ಧಿಗೆ ಮತ್ತು ಅದರ ಪ್ರಜೆಗಳ ಕಲ್ಯಾಣಕ್ಕಾಗಿ ವಿವೇಚನೆಯಿಂದ ಬಳಸಲಾಗಿದೆ ಎಂದು ಅವರಿಗೆ ಭರವಸೆ ನೀಡಲು ನಾನು ಬಯಸಿದ್ದೇನೆ. ತೆರಿಗೆದಾರರ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ ’ ಎಂದು ಹೇಳಿದರು.