ಬಜೆಟ್ 2024-25 : ಸಚಿವರ ವೇತನ, ಆತಿಥ್ಯ, ಮನರಂಜನೆಗೆ 1,249 ಕೋಟಿ ರೂ. ಮೀಸಲು!
ನಿರ್ಮಲಾ ಸೀತಾರಾಮನ್ | Photo: PTI
ಹೊಸದಿಲ್ಲಿ: 2024-25ನೇ ಸಾಲಿನ ಮಧ್ಯಂತರ ಬಜೆಟ್ ನಲ್ಲಿ ಸಂಪುಟ ಸಚಿವರು, ಸಂಪುಟ ಕಾರ್ಯದರ್ಶಿಗಳು, ಪ್ರಧಾನ ಮಂತ್ರಿಗಳ ಕಾರ್ಯಾಲಯ ಹಾಗೂ ದೇಶಕ್ಕೆ ಆಗಮಿಸುವ ಅತಿಥಿಗಳ ಆತಿಥ್ಯ ಹಾಗೂ ಮನರಂಜನೆಗಾಗಿ 1,248.91 ಕೋಟಿ ರೂ. ಮೊತ್ತವನ್ನು ಮೀಸಲಿರಿಸಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಮೊತ್ತವು 2023-24ನೇ ಸಾಲಿನ ರೂ. 1,803.01 ಕೋಟಿ ಮೊತ್ತಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆಯಾಗಿದೆ.
ಸಂಪುಟ ಸಚಿವರ ವೆಚ್ಚಕ್ಕಾಗಿ ಈ ಬಾರಿ ರೂ. 832.81 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ. ಈ ಮೊತ್ತವು 2023-24ನೇ ಬಜೆಟ್ ಸಾಲಿನಲ್ಲಿ ರೂ. 1,289.28 ಕೋಟಿಯಾಗಿತ್ತು.
ಈ ವೆಚ್ಚವನ್ನು ಸಂಪುಟ ದರ್ಜೆಯ ಸಚಿವರು, ರಾಜ್ಯ ದರ್ಜೆಯ ಸಚಿವರು ಹಾಗೂ ಮಾಜಿ ಪ್ರಧಾನಿಗಳ ವೇತನಗಳು ಹಾಗೂ ಇನ್ನಿತರ ಭತ್ಯೆಗಳು ಮತ್ತು ಪ್ರಯಾಣಕ್ಕಾಗಿ ಮೀಸಲಿರಿಸಲಾಗಿದೆ. ಈ ಮೊತ್ತವು ಅತಿ ಗಣ್ಯ ವ್ಯಕ್ತಿಗಳಿಗೆ ವಿಶೇಷ ಹೆಚ್ಚುವರಿ ಅವಧಿಯ ವಿಮಾನ ಕಾರ್ಯಾಚರಣೆಯ ವೆಚ್ಚವನ್ನೂ ಒಳಗೊಂಡಿದೆ.
ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯಕ್ಕೆ ರೂ. 200 ಕೋಟಿಯನ್ನು ಮೀಸಲಿಡಲಾಗಿದೆ. (2023-24ನೇ ಬಜೆಟ್ ಸಾಲಿನಲ್ಲಿ ರೂ. 299.30 ಕೋಟಿ)
ಈ ಮೊತ್ತವನ್ನು ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯದ ಆಡಳಿತಾತ್ಮಕ ವೆಚ್ಚ ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ.
ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಗೆ ರೂ. 76.20 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ. (2023-24ನೇ ಸಾಲಿನಲ್ಲಿ ರೂ. 75 ಕೋಟಿ). ಈ ಮೊತ್ತವನ್ನು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಆಡಳಿತಾತ್ಮಕ ವೆಚ್ಚಕ್ಕಾಗಿ ಮೀಸಲಿಡಲಾಗಿದೆ.
ಸಂಪುಟ ಕಾರ್ಯಾಲಯಕ್ಕೆ ರೂ. 70 ಕೋಟಿಯನ್ನು ಮೀಸಲಿಡಲಾಗಿದೆ. (2023-24ನೇ ಸಾಲಿನಲ್ಲಿ ರೂ. 70.28 ಕೋಟಿ). ಈ ಮೊತ್ತವನ್ನು ರಾಸಾಯನಿಕ ಶಸ್ತ್ರಾಸ್ತ್ರ ಒಡಂಬಡಿಕೆಯ ಆಡಳಿತಾತ್ಮಕ ವೆಚ್ಚಗಳಿಗಾಗಿ ಮೀಸಲಿಡಲಾಗಿದೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯದ ಆಡಳಿತಾತ್ಮಕ ವೆಚ್ಚಗಳಿಗಾಗಿ ಈ ಬಾರಿ ರೂ. 65.30 ಕೋಟಿ (2023-24ನೇ ಸಾಲಿನಲ್ಲಿ 62.65 ಕೋಟಿ) ಮೀಸಲಿಡಲಾಗಿದೆ.
ಈ ಬಾರಿಯ ಮಧ್ಯಂನತರ ಬಜೆಟ್ ನಲ್ಲಿ ಆತಿಥ್ಯ ಹಾಗೂ ಮನರಂಜನೆ ವೆಚ್ಚವಾಗಿ ರೂ. 4 ಕೋಟಿಯನ್ನು ಮೀಸಲಿಡಲಾಗಿದೆ. ಕಳೆದ ಬಾರಿಯೂ ಇಷ್ಟೇ ಮೊತ್ತವನ್ನು ಮೀಸಲಿಡಲಾಗಿತ್ತು.