ʼನರೇಗಾ ಯೋಜನೆಗೆ ಬಜೆಟ್ ನಲ್ಲಿ ಅನುದಾನ ಕಡಿತಗೊಳಿಸಲಾಗುತ್ತಿದೆʼ: ಸಂಸತ್ತಿನಲ್ಲಿ ಸಂಸದ ಶಶಿಕಾಂತ್ ಸೆಂಥಿಲ್ ವಾಗ್ದಾಳಿ
ಶಶಿಕಾಂತ್ ಸೆಂಥಿಲ್
ಹೊಸದಿಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಗೆ ಬಜೆಟ್ ನಲ್ಲಿ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಶಶಿಕಾಂತ್ ಸೆಂಥಿಲ್, ನರೇಗಾ ಯೋಜನೆಯು ಈ ಸರಕಾರ ಎಷ್ಟು ಕುರುಡಾಗಿದೆ ಎನ್ನುವುದಕ್ಕೆ ದೊಡ್ಡ ಉದಾಹರಣೆಯಾಗಿದೆ. ಪ್ರತಿ ವರ್ಷ ಬಜೆಟ್ ಕಡಿಮೆ ಮಾಡುತ್ತಿರುವ ಕುರಿತು ಸತ್ಯವನ್ನು ಸಚಿವರೇ ಒಪ್ಪಿಕೊಂಡಿದ್ದಾರೆ. ಇದಕ್ಕೆ ಕಾರಣವೇನು ಎಂದು ನಾನು ತಿಳಿಯಲು ಬಯಸುತ್ತೇನೆ, ನಿಮಗೆ ಕಾರ್ಯಕ್ರಮವನ್ನು ನಿಲ್ಲಿಸುವ ಉದ್ದೇಶ ವಿಲ್ಲದಿದ್ದರೆ ಪ್ರತಿ ವರ್ಷ ನೀವು ಯಾಕೆ ಈ ಯೊಜನೆಯ ಬಜೆಟ್ ಕಡಿತಗೊಳಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನೀವು ಈ ಕಾರ್ಯಕ್ರಮವನ್ನು ನಿಲ್ಲಿಸಲು ಬೇಕಿದ್ದನ್ನೆಲ್ಲಾ ಮಾಡಿದ್ದೀರಿ. ನೀವು App ಪರಿಚಯಿಸಿದ್ದೀರಿ, ಕಾರ್ಮಿಕರು ಇದರಲ್ಲಿ ನೋಂದಣಿ ಮಾಡಬೇಕು. ಎಷ್ಟು ಜನರಿಗೆ ಅದರಲ್ಲಿ ನೋಂದಣಿ ಮಾಡಲಿಕ್ಕೆ ಸಾಧ್ಯವಾಗಿಲ್ಲ ಎಂಬ ಅರಿವು ಇದೆಯಾ? ನೀವು ನರೇಗಾ ಯೋಜನೆಯಡಿಯಲ್ಲಿನ ಜಾಬ್ ಕಾರ್ಡ್ ಗಳನ್ನು ಡಿಲಿಟ್ ಮಾಡಿದ್ದೀರಿ, ನಿಮ್ಮಲ್ಲಿ ಎಷ್ಟು ಕಾರ್ಡ್ ಗಳನ್ನು ಡಿಲಿಟ್ ಮಾಡಿದ್ದೀರಿ ಎಂಬುವ ಲೆಕ್ಕಾಚಾರ ಇದೆಯಾ? ನೀವು ಈ ಯೋಜನೆಯ ಬಜೆಟ್ ನ್ನು ಯಾಕೆ ಕಡಿತಗೊಳಿಸಿದ್ದೀರಿ ಎಂದು ಶಶಿಕಾಂತ್ ಸೆಂಥಿಲ್ ಸದನದಲ್ಲಿ ಪ್ರಶ್ನಿಸಿದ್ದಾರೆ.