ಬುಲ್ಡೋಜರ್ ನ್ಯಾಯ ದೇಶದ ಕಾನೂನು ಧ್ವಂಸಕ್ಕೆ ಸಮ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: 'ಬುಲ್ಡೋಜರ್ ನ್ಯಾಯ'ದಲ್ಲಿ ಷಾಮೀಲಾಗಿರುವ ಅಧಿಕಾರಿಗಳು ನೆಲದ ಕಾನೂನಿನ ಮೇಲೆ ಬುಲ್ಡೋಜರ್ ಹರಿಸುವುದಕ್ಕೆ ಸಮ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಇಂಥ ಕ್ರಮಗಳು ಕಾನೂನು ವಿರೋಧಿ. ಒಬ್ಬ ವ್ಯಕ್ತಿ ಅಪರಾಧದಲ್ಲಿ ಷಾಮೀಲಾಗಿದ್ದಾನೆ ಎಂದು ಸಾಬೀತಾದರೂ ಆತನ ಆಸ್ತಿಯನ್ನು ಧ್ವಂಸಗೊಳಿಸಲು ಅದು ಸಕಾರಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಪರಾಧಿಗಳ ಆಸ್ತಿಗಳನ್ನು ಧ್ವಂಸಗೊಳಿಸುವ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಕಳವಳ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 2ರಂದು ತೀರ್ಪು ನೀಡಿ, ಆರೋಪಿಗಳು ಶಿಕ್ಷೆಗೆ ಒಳಪಟ್ಟರೂ, ಕುಟುಂಬದ ಆಸರೆ ಎನಿಸಿದ ಮನೆಗಳನ್ನು ಕೆಡವಲು ಕಾನೂನು ಅನುಮತಿ ನೀಡುವುದಿಲ್ಲ. ಇಂಥ ಬೇಕಾಬಿಟ್ಟಿ ಧ್ವಂಸ ಕಾರ್ಯಾಚರಣೆಯನ್ನು ತಡೆಯಲು ಎಲ್ಲ ರಾಜ್ಯಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ರೂಪಿಸುವುದಾಗಿ ಹೇಳಿತ್ತು.
ಅಪರಾಧಿಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಆರಂಭಿಸಿದ ಈ ದಂಡನಾ ಕ್ರಮವನ್ನು ರಾಜಸ್ಥಾನ, ಗುಜರಾತ್ ಹಾಗೂ ಮಧ್ಯಪ್ರದೇಶ ಅನುಸರಿಸುತ್ತಿವೆ.
ಗುಜರಾತ್ ನಲ್ಲಿ ಅಧಿಕಾರಿಗಳು ಮನೆ ಧ್ವಂಸಗೊಳಿಸುವ ಎಚ್ಚರಿಕೆ ನೀಡಿರುವ ಬಗ್ಗೆ ಕುಟುಂಬವೊಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧೂಲಿಯಾ ಮತ್ತು ಎಸ್. ವಿ. ಎನ್. ಭಟ್ಟಿ ನ್ಯಾಯಪೀಠ, ಈ ಕ್ರಮಕ್ಕೆ ಅನುಮತಿ ನೀಡಿಲ್ಲ. ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ ಇಡೀ ಕುಟುಂಬಕ್ಕೆ ಶಿಕ್ಷೆ ವಿಧಿಸಲಾಗದು ಎಂದು ಹೇಳಿದೆ.