ಬಸ್ ಅಪಘಾತ: ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ 12 ಮಂದಿ ಮೃತ್ಯು
ಬೆರ್ಹಾಂಪುರ: ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಮರಳುತ್ತಿದ್ದ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಹಾಗೂ ಮತ್ತೊಂದು ಪ್ರಯಾಣಿಕರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಬಸ್ನಲ್ಲಿದ್ದ ಅತಿಥಿಗಳ ಪೈಕಿ 12 ಮಂದಿ ಮೃತಪಟ್ಟು, 7 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಗಂಜಮ್ ಜಿಲ್ಲೆಯಿಂದ 35 ಕಿಮೀ ದೂರವಿರುವ ಬೆರ್ಹಾಂಪುರ-ತಪ್ತಪಾನಿ ರಸ್ತೆಯಲ್ಲಿ ಡಿಗಾಪಹಂದಿ ಬಳಿ ಭಾನುವಾರ ಮಧ್ಯರಾತ್ರಿ ವಿವಾಹ ಸಮಾರಂಭದ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಹಾಗೂ ಮತ್ತೊಂದು ಪ್ರಯಾಣಿಕರ ವಾಹನದ ನಡುವೆ ಅಪಘಾತ ಸಂಭವಿಸಿದೆ ಎಂದು ಬೆರ್ಹಾಂಪುರದ ಪೊಲೀಸ್ ವರಿಷ್ಠಾಧಿಕಾರಿ ಸರವಣ ವಿವೇಕ್ ಎಂ. ತಿಳಿಸಿದ್ದಾರೆ.
Horrific road accident in Odisha's Ganjam: 12 people killed, several injured in collision between an OSRTC bus and private bus carrying a marriage party.#RoadAccidentInOdisha pic.twitter.com/DYMkg8Ug19
— OTV (@otvnews) June 26, 2023
ಬೆರ್ಹಾಂಪುರದಲ್ಲಿ ಜರುಗಿದ್ದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ನಂತರ ಡಿಗಾಪಹಂದಿ ಬಳಿಯಿರುವ ಖಾಂಡಾಡ್ಯೂಲಿಗೆ ಮರಳುವಾಗ ಈ ಅಪಘಾತ ಸಂಭವಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿಗಳು ಗಾಯಾಳುಗಳನ್ನು ರಕ್ಷಿಸಿ, ಅವರನ್ನೆಲ್ಲ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಒಂದೇ ಕುಟುಂಬದ ಏಳು ಮಂದಿ ಸದಸ್ಯರು ಹಾಗೂ ಅವರ ಸಂಬಂಧಿಕರು ಮೃತಪಟ್ಟಿರುವ 12 ಮಂದಿ ಪೈಕಿ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.
ಬೆರ್ಹಾಂಪುರದಲ್ಲಿರುವ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಡಿಗಾಪಹಂದಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗಾಯಾಳುಗಳ ಪೈಕಿ ಇಬ್ಬರನ್ನು ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಪ್ರತಿ ಗಾಯಾಳುವಿನ ಚಿಕಿತ್ಸೆಗಾಗಿ ತಲಾ ರೂ. 30,000 ಪರಿಹಾರವನ್ನು ವಿಶೇಷ ಪರಿಹಾರ ಆಯೋಗವು ಬಿಡುಗಡೆ ಮಾಡಿದೆ.