ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸಲು ಬಿಜೆಪಿ ವಿಫಲ!; ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ?

Photo credit: PTI
ಗುವಾಹಟಿ: ಮಣಿಪುರ ಮುಖ್ಯಮುಂತ್ರಿ ಹುದ್ದೆಗೆ ಬಿರೇನ್ ಸಿಂಗ್ ರಾಜೀನಾಮೆ ನೀಡಿ ಮೂರು ದಿನಗಳು ಕಳೆದರೂ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸಲು ಆಡಳಿತಾರೂಢ ಬಿಜೆಪಿ ವಿಫಲವಾದ ಕಾರಣ ಸಂಘರ್ಷ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಕುರಿತು ಚರ್ಚೆ ನಡೆಯುತ್ತಿದೆ.
ಮಣಿಪುರದ ಮುಖ್ಯಮಂತ್ರಿ ಹುದ್ದೆಗೆ ಬಿರೇನ್ ಸಿಂಗ್ ರಾಜೀನಾಮೆ ಬಳಿಕ ಬಿಜೆಪಿಯ ಮಣಿಪುರದ ಉಸ್ತುವಾರಿ ಸಂಬಿತ್ ಪಾತ್ರ ಇಂಫಾಲ್ ನ ಹೋಟೆಲ್ ನಲ್ಲಿ ತಂಗಿದ್ದಾರೆ. ಅವರನ್ನು ಸಚಿವ ತೊಂಗಮ್ ಬಿಸ್ವಜಿತ್, ಸ್ಪೀಕರ್ ಥೋಕ್ಚೋಮ್ ಸತ್ಯಬ್ರತ ಸಿಂಗ್ ಮತ್ತು ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಭೇಟಿ ಮಾಡಿದ್ದಾರೆ. ಆ ಬಳಿಕ ಹಂಗಾಮಿ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರುವ ಬಿರೇನ್ ಸಿಂಗ್ ಅವರೊಂದಿಗೂ ಸಂಬಿತ್ ಪಾತ್ರಾ ಮಾತುಕತೆ ನಡೆಸಿದ್ದಾರೆ.
ಸಂಬಿತ್ ಪಾತ್ರ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಶಾರದಾ ದೇವಿ ಶಾಸಕರ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ ನಂತರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾಗಿದ್ದಾರೆ. ಆದರೆ ಮುಖ್ಯಮಂತ್ರಿಯ ನೇಮಕದ ಬಗ್ಗೆ ಬಿಜೆಪಿಯಿಂದ ಯಾವುದೇ ಘೋಷಣೆ ಬಂದಿಲ್ಲ.
ಮಣಿಪುರದಲ್ಲಿ ಬಿಜೆಪಿ ಎರಡನೇ ಅವಧಿಗೆ ಸರ್ಕಾರವನ್ನು ರಚಿಸಿದಾಗ ಬಿಸ್ವಜಿತ್ ಸಿಎಂ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಬಿಸ್ವಜಿತ್ ಅವರು 2015ರಲ್ಲಿ ತೃಣಮೂಲ ತೊರೆದು ಬಿಜೆಪಿ ಸೇರಿದ್ದರು. 2016ರಲ್ಲಿ ಬಿರೇನ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು. ಬಿರೇನ್ ಅವರನ್ನು ಎರಡನೇ ಅವಧಿಗೆ ಸಿಎಂ ಮಾಡುವ ಪಕ್ಷದ ನಿರ್ಧಾರಕ್ಕೆ ಬಿಸ್ವಜಿತ್ ಅಸಮಾಧಾನಗೊಂಡಿದ್ದರು.
ಬಿಜೆಪಿ ಸಿಎಂ ಆಯ್ಕೆ ಬಗ್ಗೆ ಮಿತ್ರಪಕ್ಷಗಳಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ, ನಾಗಾ ಪೀಪಲ್ಸ್ ಫ್ರಂಟ್ ಮತ್ತು ಜನತಾ ದಳ(ಯುನೈಟೆಡ್) ಶಾಸಕರ ಜೊತೆ ಮಾತುಕತೆಯನ್ನು ನಡೆಸುತ್ತಿದೆ. ಬಿರೇನ್ ಅವರಿಂದ ತೆರವಾದ ಸ್ಥಾನಕ್ಕೆ ಸಮರ್ಥ ನಾಯಕನನ್ನು ನಿರ್ಧರಿಸಲು ಬಿಜೆಪಿ ವಿಫಲವಾದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಘೋಷಣೆ ಸಾಧ್ಯತೆ ಇದೆ.
ಸಂವಿಧಾನದ ಸೆಕ್ಷನ್ 174 ರ ಪ್ರಕಾರ, ವಿಧಾನಸಭೆಯ ಎರಡು ಅಧಿವೇಶನಗಳ ನಡುವೆ ಗರಿಷ್ಠ ಆರು ತಿಂಗಳ ಅಂತರವಿರಬಹುದು. ಕೊನೆಯ ಅಧಿವೇಶನವು ಆಗಸ್ಟ್ 12 ರಂದು ಕೊನೆಗೊಂಡಿದೆ, ಅದರ ಗಡುವು ಬುಧವಾರ ಮುಕ್ತಾಯಗೊಳ್ಳಲಿದೆ.
ವಿಧಾನಸಭೆಯಲ್ಲಿ ಬಿರೆನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಪ್ರತಿಪಕ್ಷ ಕಾಂಗ್ರೆಸ್ ಈ ಮೊದಲು ಮುಂದಾಗಿತ್ತು. ತಾವು ರಾಷ್ಟ್ರಪತಿ ಆಳ್ವಿಕೆಯ ಪರವಾಗಿಲ್ಲ. ರಾಜ್ಯದಲ್ಲಿ ಶಾಂತಿ ಕಾಪಾಡುವ ಸಮರ್ಥ ಸರಕಾರವನ್ನು ಬಯಸುವುದಾಗಿ ಹೇಳಿಕೊಂಡಿದೆ.