ಉಪ ಚುನಾವಣೆ ಫಲಿತಾಂಶ | ಪಶ್ಚಿಮ ಬಂಗಾಳದ ಎಲ್ಲಾ ಆರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಟಿಎಂಸಿ
ಗುಜರಾತ್ ವಾವ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ
PC : PTI
ಹೊಸ ದಿಲ್ಲಿ: ದೇಶಾದ್ಯಂತ 13 ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳು ಹಾಗೂ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಈ ಪೈಕಿ ಪಶ್ಚಿ ಮ ಬಂಗಾಳದ ಎಲ್ಲ ಆರು ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿಎಂಸಿ ಆರಂಭಿಕ ಮುನ್ನಡೆ ಸಾಧಿಸಿದೆ. ಭ್ರಷ್ಟಾಚಾರ ಆರೋಪಗಳು ಹಾಗೂ ಇತ್ತೀಚೆಗೆ ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದ ತರಬೇತಿನಿರತ ವೈದ್ಯೆಯ ಹತ್ಯೆ ಪ್ರಕರಣದ ಬಗ್ಗೆ ವ್ಯಕ್ತವಾಗಿದ್ದ ಸಾರ್ವಜನಿಕರ ಆಕ್ರೋಶದ ಲಾಭ ಪಡೆಯಲು ಬಿಜೆಪಿ ಮುಂದಾಗಿತ್ತು. ಆದರೆ, ಆರಂಭಿಕ ಟ್ರೆಂಡ್ ಗಳ ಪ್ರಕಾರ, ಆಡಳಿತಾರೂಢ ಟಿಎಂಸಿ ಎಲ್ಲ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದು, ಕ್ಲೀನ್ ಸ್ವೀಪ್ ಮಾಡುವ ಆಶಯದಲ್ಲಿದೆ.
ಗುಜರಾತ್ ನ ವಾವ್ ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುಲಾಬ್ ಸಿಂಗ್ ರಜಪೂತ್ ಆರಂಭಿಕ ಮುನ್ನಡೆ ಸಾಧಿಸಿದ್ದು, 15,000ಕ್ಕೂ ಹೆಚ್ಚು ಮತಗಳ ಮುನ್ನಡೆ ಗಳಿಸಿದ್ದಾರೆ. ಗುಜರಾತ್ ನ ಬನಸ್ಕಾಂತ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾದ ವಾವ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುಲಾಬ್ ಸಿಂಗ್ ರಜಪೂತ್, ಬಿಜೆಪಿ ಅಭ್ಯರ್ಥಿ ಸ್ವರೂಪ್ ಜೀ ಠಾಕೂರ್ ಹಾಗೂ ಬಿಜೆಪಿಯ ಬಂಡಾಯ ಅಭ್ಯರ್ಥಿ ಮಾವ್ಜಿ ಪಟೇಲ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.