ಸಿಎಎ ಯಾರ ಪೌರತ್ವವನ್ನೂ ಕಸಿಯುವುದಿಲ್ಲ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ (PTI)
ಮುಂಬೈ : ಪೌರತ್ವ ತಿದ್ದುಪಡಿ ಕಾಯ್ದೆಯು, ವ್ಯಕ್ತಿಗೆ ಪೌರತ್ವದ ಸ್ಥಾನಮಾವನ್ನು ನೀಡುತ್ತದೆಯೇ ಹೊರತು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ತಿಳಿಸಿದ್ದಾರೆ.
ಅಹ್ಮದಾಬಾದ್ ನಲ್ಲಿ ನಡೆದ ಭಾರತದಲ್ಲಿ ಆಶ್ರಯ ಕೋರಿದ ವ್ಯಕ್ತಿಗಳಿಗೆ ಭಾರತೀಯ ಪೌರತ್ವದ ಪ್ರಮಾಣಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
‘‘ಭಾರತದಲ್ಲಿ ಆಶ್ರಯ ಕೋರಿದ್ದ ಈ ವ್ಯಕ್ತಿಗಳು ಹಿಂದೂ, ಬೌದ್ಧ, ಸಿಖ್ ಅಥವಾ ಜೈನರೆಂಬ ಕಾರಣಕ್ಕಾಗಿ ನೆರೆಹೊರೆಯ ರಾಷ್ಟ್ರಗಳಲ್ಲಿ ಇವರು ದಬ್ಬಾಳಿಕೆಗೆ ಒಳಗಾದವರಾಗಿದ್ದಾರೆ. ಇಂಡಿ ಮೈತ್ರಿಕೂಟದ ತುಷ್ಟೀಕರಣ ರಾಜಕೀಯವು ಅವರಿಗೆ ನ್ಯಾಯವನ್ನು ಕೊಡಿಸಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಇವರಿಗೆ ನ್ಯಾಯ ಒದಗಿಸಿದ್ದಾರೆ’’ ಎಂದು ಶಾ ಹೇಳಿದರು.
ಭಾರತೀಯ ಪೌರತ್ವದ ಪ್ರಮಾಣಪತ್ರವನ್ನು ಸ್ವೀಕರಿಸಿದ ನಿರಾಶ್ರಿತೆ ಪ್ರೇಮಲತಾ ಮಾತನಾಡಿ ‘‘ ನೆರೆಯ ರಾಷ್ಟ್ರದಲ್ಲಿ ಶಾಂತಿಯುತವಾಗಿ ಬಾಳಲು ನಮಗೆ ಅವಕಾಶ ನೀಡಲಿಲ್ಲ. ನಮಗೆ ಅಲ್ಲಿ ಕಿರುಕುಳ ನೀಡಲಾಗುತ್ತಿತ್ತು. ನಾವು ಇಲ್ಲಿಗೆ ಬಂದು ಪೌರತ್ವವನ್ನು ಸ್ವೀಕರಿಸಿದ್ದೆವು. ನಮಗೆ ತುಂಬಾ ಸಂತಸವಾಗಿದೆ’’ ಎಂದರು.
ಅಹ್ಮದಾಬಾದ್ ನಲ್ಲಿ ನಡೆದ ಇನ್ನೊಂದು ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಆಮ್ಲಜನಕ ಉತ್ಪಾದನಾ ಘಟಕ, 6,41.003 ಕೋಟಿ ರೂ. ವೆಚ್ಚದ 45 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಪರಿಸರ ರಕ್ಷಣೆಗಾಗಿ ದೇಶವ್ಯಾಪಿಯಾಗಿ ನಡೆಯುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಜನತೆಗೆ ಕರೆ ನೀಡಿದರು.ಅಹ್ಮದಾಬಾದ್ ಮಹಾನಗರಪಾಲಿಕೆಯು 30 ಲಕ್ಷ ಗಿಡಗಳನ್ನು ನೆಡುವುದಾಗಿ ಘೋಷಿಸಿದ್ದು ಈ ಅಭಿಯಾನದ ಜೊತೆ ತಾನು ನಿಕಟವಾದ ನಂಟನ್ನು ಹೊಂದಿರುವುದಾಗಿ ತಿಳಿಸಿದರು.