ಸಿಎಎ ಅಲ್ಪಸಂಖ್ಯಾತರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ: ಅಮಿತ್ ಶಾ
ಅಮಿತ್ ಶಾ | Photo: PTI
ಹೈದರಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಯಾವುದೇ ಅಲ್ಪಸಂಖ್ಯಾತರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಈ ಕುರಿತು ಜನರಲ್ಲಿ ತಪ್ಪು ಕಲ್ಪನೆಯನ್ನು ಹರಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಹೈದರಾಬಾದ್ ನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ತೆಲಂಗಾಣದ ಬಿಜೆಪಿಯ ಬೂತ್ ಅಧ್ಯಕ್ಷರ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆಯು ಪೌರತ್ವವನ್ನು ನೀಡುತ್ತದೆಯೆ ಹೊರತು ಕಿತ್ತುಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
“ಪೌರತ್ವ ತಿದ್ದುಪಡಿ ಕಾಯ್ದೆಯ ಕಾರಣಕ್ಕೆ ಈ ದೇಶದ ಅಲ್ಪಸಂಖ್ಯಾತ ಸಹೋದರರು ಹಾಗೂ ತಾಯಂದಿರು ತಮ್ಮ ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆಯು ಪೌರತ್ವವನ್ನು ನೀಡುತ್ತದೆಯೆ ಹೊರತು ಕಿತ್ತುಕೊಳ್ಳುವುದಿಲ್ಲ. ಈ ಕಾಯ್ದೆಯು ಪೌರತ್ವವನ್ನು ಕಿತ್ತುಕೊಳ್ಳುತ್ತದೆ ಎಂದು ಉವೈಸಿ, ಖರ್ಗೆ, ರಾಹುಲ್ ಗಾಂಧಿಯಾದಿಯಾಗಿ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯಡಿ ಯಾರದೆ ಪೌರತ್ವವನ್ನು ಕಿತ್ತುಕೊಳ್ಳುವ ಅವಕಾಶವಿಲ್ಲ ಹಾಗೂ ಅದರಲ್ಲಿ ನಮ್ಮ ನಿರಾಶ್ರಿತರಿಗೆ ಪೌರತ್ವ ನೀಡುವ ಅವಕಾಶ ಮಾತ್ರವಿದೆ” ಎಂದು ಅವರು ಭರವಸೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ನೀಡಿದ್ದ ಭರವಸೆಯನ್ನು ಮೋದಿ ಸರಕಾರವು ನಿನ್ನೆ ಜಾರಿಗೊಳಿಸಿದೆ ಎಂದು ಅಮಿತ್ ಶಾ ತಿಳಿಸಿದರು.