ದತ್ತಾಂಶ ರಕ್ಷಣಾ ಮಸೂದೆಗೆ ಸಚಿವ ಸಂಪುಟ ಅಂಗೀಕಾರ
ಮುಂಗಾರು ಅಧಿವೇಶನದಲ್ಲಿ ಮಂಡನೆ
ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟವು ಬುಧವಾರ ದತ್ತಾಂಶ ರಕ್ಷಣಾ ಮಸೂದೆಗೆ ಅಂಗೀಕಾರ ನೀಡಿದೆ. ಮಸೂದೆಯನ್ನು ಇನ್ನು ಸಂಸತ್ ನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುವುದು.
ದತ್ತಾಂಶ ರಕ್ಷಣೆಗೆ ಶಾಸನವೊಂದನ್ನು ರೂಪಿಸಲು ಕೇಂದ್ರ ಸರಕಾರ ಮಾಡುತ್ತಿರುವ ಎರಡನೇ ಪ್ರಯತ್ನ ಇದಾಗಿದೆ. ಖಾಸಗಿತನದ ಹಕ್ಕು ಎಲ್ಲಾ ಭಾರತೀಯರ ಮೂಲಭೂತ ಹಕ್ಕಾಗಿದೆ ಎಂದು ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ಘೋಷಿಸಿದ ಸುಮಾರು ಆರು ವರ್ಷಗಳ ಬಳಿಕ ಕೇಂದ್ರ ಸರಕಾರ ಮತ್ತೊಮ್ಮೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ.
ನವೆಂಬರ್ನಲ್ಲಿ ಸಿದ್ಧಗೊಂಡ ಕರಡು ಮಸೂದೆಗೆ 21,000ಕ್ಕಿಂತಲೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ ಎಂದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ‘‘ನಾವು ಸುಮಾರು 48 ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ತಂತ್ರಜ್ಞಾನ ಬದಲಾಗುತ್ತಿದ್ದರೂ ಕಾಲದ ಪರೀಕ್ಷೆಯನ್ನು ಎದುರಿಸಲು ಸಿದ್ಧವಿರುವಂತೆ ಮಸೂದೆಯನ್ನು ನಾವು ರೂಪಿಸಿದ್ದೇವೆ’’ ಎಂದು ಅವರು ಹೇಳಿದರು.
ಆದರೆ, ಮಸೂದೆಯ ವಿವರಗಳನ್ನು ಗುಪ್ತವಾಗಿಡಲಾಗಿದೆ. ಕರಡು ಮಸೂದೆಯ ಬಗ್ಗೆ ನಾಗರಿಕ ಸಮಾಜ ಮತ್ತು ಸರಕಾರಿ ಸಂಸ್ಥೆಗಳಿಂದ ಬಂದಿರುವ ಅಭಿಪ್ರಾಯಗಳನ್ನು ಒದಗಿಸುವಂತೆ ಕೋರಿ ಸಲ್ಲಿಸಲಾಗಿರುವ ಆರ್ಟಿಐ ಅರ್ಜಿಗಳಿಗೆ ನರೇಂದ್ರ ಮೋದಿ ಸರಕಾರವು ಮಾಹಿತಿಯನ್ನು ನಿರಾಕರಿಸಿದೆ.
‘‘ಕರಡು ಮಸೂದೆಯು ಮೂಲಭೂತವಾಗಿ ದೋಷಪೂರಿತವಾಗಿದೆ. ವೈಯಕ್ತಿಕ ಮಾಹಿತಿಗಳ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಲು ಈ ಮಸೂದೆಯು ಸರಕಾರಕ್ಕೆ ಅವಕಾಶ ಕಲ್ಪಿಸುತ್ತದೆ’’ ಎಂದು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಬಿ.ಎನ್. ಶ್ರೀಕೃಷ್ಣ ಹೇಳಿದ್ದಾರೆ.
‘‘ಕರಡು ಮಸೂದೆಯು ಎಲ್ಲಾ ಸರಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ವಿನಾಯಿತಿ ನೀಡುತ್ತದೆ. ಇದು ಅಪಾಯಕಾರಿಯಾಗಿದೆ. ಇದು ಸರಕಾರಕ್ಕೆ ಸ್ವೇಚ್ಛಾಚಾರದಿಂದ ವರ್ತಿಸಲು ಅವಕಾಶ ನೀಡುತ್ತದೆ’’ ಎಂದು ಅವರು ಎಚ್ಚರಿಸಿದ್ದಾರೆ.