ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಈಡಿಗೆ ಕಲ್ಕತ್ತಾ ಹೈಕೋರ್ಟ್ ಅನುಮತಿ
ಕಲ್ಕತ್ತಾ ಹೈಕೋರ್ಟ್ | Photo: NDTV
ಕೊಲ್ಕತ್ತ: ಅಮಾನತುಗೊಂಡಿರುವ ಟಿಎಂಸಿ ನಾಯಕ ಶಾಜಹಾನ್ ಶೇಖ್ ರನ್ನು ಸಿಬಿಐ ಕಸ್ಟಡಿಗೆ ಒಪ್ಪಿಸುವಂತೆ ತಾನು ನೀಡಿರುವ ಆದೇಶವನ್ನು ಪಶ್ಚಿಮ ಬಂಗಾಳ ಪೊಲೀಸರು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಕಲ್ಕತ್ತಾ ಹೈಕೋರ್ಟ್ ಬುಧವಾರ ಅನುಷ್ಠಾನ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.
ಅನುಷ್ಠಾನ ನಿರ್ದೇಶನಾಲಯದ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಉಪ ಸಾಲಿಸಿಟರ್ ಜನರಲ್ ಧೀರಜ್ ತ್ರಿವೇದಿ, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅನುಮತಿ ಕೋರಿದರು ಮತ್ತು ಅದರ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ವಿನಂತಿಸಿದರು. ಶೇಖ್ ರ ಸಿಬಿಐ ಕಸ್ಟಡಿಯ ಅಮೂಲ್ಯ ಸಮಯ ವ್ಯಯವಾಗುತ್ತಿದೆ ಎಂದು ಅವರು ಹೇಳಿದರು.
ರೇಶನ್ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿ, ಜನವರಿ 5ರಂದು 24 ಪರಗಣಾಸ್ ಜಿಲ್ಲೆಯ ಸಂದೇಶ್ಖಾಲಿಯಲ್ಲಿರುವ ಶೇಖ್ ರ ನಿವಾಸವನ್ನು ಶೋಧಿಸಲು ಹೋದಾಗ ಅನುಷ್ಠಾನ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಜನರ ಗುಂಪೊಂದು ದಾಳಿ ನಡೆಸಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್ ಮಂಗಳವಾರ ರಾಜ್ಯ ಸರಕಾರಕ್ಕೆ ಸೂಚಿಸಿತ್ತು.
ನ್ಯಾಯಮೂರ್ತಿಗಳಾದ ಹರೀಶ್ ಟಂಡನ್ ಮತ್ತು ಹಿರಣ್ಮಯ ಭಟ್ಟಾಚಾರ್ಯ ಅವರನ್ನೊಳಗೊಂಡ ವಿಭಾಗ ಪೀಠವೊಂದು, ನ್ಯಾಯಾಂಗ ನಿಂದನೆ ಮೊಕದ್ದಮೆ ಸಲ್ಲಿಸಲು ಅನುಷ್ಠಾನ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.