ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ರಾಜೀನಾಮೆ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ
ನ್ಯಾ. ಅಭಿಜಿತ್ ಗಂಗೋಪಾಧ್ಯಾಯ (Photo: NDTV)
ಹೊಸದಿಲ್ಲಿ: ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಸಂದರ್ಶನವೊಂದರ ನಂತರ, ತಾನು ವಿಚಾರಣೆ ನಡೆಸುತ್ತಿರುವ ಲಂಚ ಪ್ರಕರಣದ ಕುರಿತು ಚರ್ಚಿಸಿದ ಕಾರಣಕ್ಕೆ ಸುದ್ದಿಯಾಗಿದ್ದ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಇಂದು ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಗಂಗೋಪಾಧ್ಯಾಯ, ನಾನು ಈ ವಿಷಯವನ್ನು ಅದಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಿಳಿಸಿದ್ದು, ಸೌಜನ್ಯಯುತ ಭೇಟಿಗಾಗಿ ಇಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಅವರನ್ನು ಭೇಟಿಯಾಗುವ ಯೋಜನೆ ಇದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ತಮ್ಲುಕ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗಂಗೋಪಾಧ್ಯಾಯ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಈ ಲೋಕಸಭಾ ಕ್ಷೇತ್ರವು ಆಡಳಿತಾರೂಢ ಟಿಎಂಸಿಯ ಭದ್ರಕೋಟೆಯಾಗಿ ಬದಲಾಗಿದ್ದು, 2009ರಿಂದ ಈ ಕ್ಷೇತ್ರವನ್ನು ಟಿಎಂಸಿ ಉಳಿಸಿಕೊಂಡು ಬರುತ್ತಿದೆ.
ತಮ್ಲುಕ್ ಲೋಕಸಭಾ ಕ್ಷೇತ್ರವನ್ನು 2009 ಹಾಗೂ 2016ರಲ್ಲಿ ಟಿಎಂಸಿ ಪಕ್ಷವನ್ನು ತೊರೆಯುವುದಕ್ಕೂ ಮುನ್ನ ಸುವೇಂದು ಅಧಿಕಾರಿ ಪ್ರತಿನಿಧಿಸುತ್ತಿದ್ದರು. ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಲಗೈ ಬಂಟ ಎಂದೇ ಪರಿಗಣಿಸಲಾಗಿತ್ತು.
ರವಿವಾರ ತಾನು ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದೇನೆ ಎಂದು ಗಂಗೋಪಾಧ್ಯಾಯ್ ಪ್ರಕಟಿಸುತ್ತಿದ್ದಂತೆಯೆ ಅವರನ್ನು ಸಂಪರ್ಕಿಸಿದ್ದ ಟಿಎಂಸಿ ಪಕ್ಷದ ವಕ್ತಾರ ಕುನಾಲ್ ಘೋಷ್, ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಅವರಿಗೆ ಆಹ್ವಾನ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಗಂಗೋಪಾಧ್ಯಾಯ, “ಅವರು ನನ್ನ ವಿರುದ್ಧ ರಾಜಕೀಯ ಪಕ್ಷವೊಂದರ ವಕ್ತಾರರಾಗಿ ಹಲವಾರು ಮಾತುಗಳನ್ನು ಆಡಿದ್ದಾರಾದರೂ, ಓರ್ವ ವ್ಯಕ್ತಿಯಾಗಿ ನಾನು ಅವರನ್ನು ಇಷ್ಟ ಪಡುತ್ತೇನೆ. ಅವರು ಉತ್ತಮ ವ್ಯಕ್ತಿಯಾಗಿದ್ದಾರೆ” ಎಂದು ಹೇಳಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮೇಲೆಯೂ ಹೊಗಳಿಕೆಯ ಮಳೆ ಸುರಿಸಿರುವ ಅವರು, ಮಮತಾ ಬ್ಯಾನರ್ಜಿ ಮಾಗಿದ ರಾಜಕಾರಣಿಯಾಗಿದ್ದಾರೆ ಹಾಗೂ ನನಗೆ ಅವರ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದ್ದಾರೆ.