ಇವಿಎಂ ತಯಾರಿಸುವ ಬಿ ಇ ಎಲ್ ಸಂಸ್ಥೆಯ ಆಡಳಿತದಲ್ಲಿ ಬಿಜೆಪಿ ಪದಾಧಿಕಾರಿಗಳು ಇರಬಹುದೇ?
ಭಾರತ ಸರಕಾರದ ಮಾಜಿ ಕಾರ್ಯದರ್ಶಿ ಇಎಎಸ್ ಶರ್ಮ ಪ್ರಶ್ನೆ
Photo : moneylife.in
ಹೊಸದಿಲ್ಲಿ: ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಗಳನ್ನು ತಯಾರಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮಂಡಳಿಯಲ್ಲಿ ನಿರ್ದೇಶಕರಾಗಿರುವ ಭಾರತೀಯ ಜನತಾ ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ವಜಾಗೊಳಿಸುವಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಸೂಚಿಸಬೇಕು. ಅವರ ಮೇಲೆ ಕೈಗೊಂಡಿರುವ ಕ್ರಮಗಳ ಬಗ್ಗೆ ದೇಶದ ಜನತೆಗೆ ಅರಿವಾಗುವಂತೆ ಸಾರ್ವಜನಿಕ ತಾಣದಲ್ಲಿ ಪ್ರಕಟಿಸಬೇಕು ಎಂದು ಮಾಜಿ ಕೇಂದ್ರ ಸರಕಾರದ ಕಾರ್ಯದರ್ಶಿ ಇಎಎಸ್ ಶರ್ಮ ಭಾರತೀಯ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ ಎಂದು moneylife.in ವರದಿ ಮಾಡಿದೆ.
ಭಾರತೀಯ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹಾಗೂ ಇಬ್ಬರು ಆಯುಕ್ತರಿಗೆ ಪತ್ರ ಬರೆದಿರುವ ಶರ್ಮ, “ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಬಿಇಎಲ್ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರಿಂದ ವಿದ್ಯುನ್ಮಾನ ಮತ ಯಂತ್ರಗಳ ಉತ್ಪಾದನೆ , ಸರಬರಾಜು ಹಾಗು ಇವಿಎಂ ಗಳಲ್ಲಿ ಮುಖ್ಯ ಪಾತ್ರವಹಿಸುವ ಚಿಪ್ ಗಳಲ್ಲಿ ಎಂಬೆಡ್ ಮಾಡುವ ರಹಸ್ಯ ಎನ್ಕ್ರಿಪ್ಟೆಡ್ ಕೋಡ್ ಗಳನ್ನು ರಚಿಸುವಲ್ಲಿ ನಿಕಟವಾಗಿ ತೊಡಗಿಸಿಕೊಂಡಿರುವ ಬಿಇಎಲ್ ನ ವ್ಯವಹಾರಗಳನ್ನು ಬಿಜೆಪಿಯೇ ನೋಡಿಕೊಳ್ಳುತ್ತಿದೆ ಎಂಬ ಭಾವನೆ ಬರುವಂತಾಗಿದೆ" ಎಂದು ಗಮನ ಸೆಳೆದಿದ್ದಾರೆ.
ಭಾರತೀಯ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇನ್ನಿಬ್ಬರು ಚುನಾವಣಾ ಆಯುಕ್ತರಿಗೆ ಇಎಎಸ್ ಶರ್ಮ ಬರೆದಿರುವ ಪತ್ರದ ಪೂರ್ಣಪಾಠ ಈ ಕೆಳಗಿನಂತಿದೆ:
ವಿದ್ಯುನ್ಮಾನ ಮತ ಯಂತ್ರಗಳಿಗೆ ಅತ್ಯಂತ ಸೂಕ್ಷ್ಮ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಬಿಇಎಲ್ ನ ಮಂಡಳಿಗೆ ಕನಿಷ್ಠ ಪಕ್ಷ ಬಿಜೆಪಿಯ ನಾಲ್ವರು ಸ್ವತಂತ್ರ ನಿರ್ದೇಶಕರನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂಬ ಸಂಗತಿಯನ್ನು ನಾನು ಈ ಮುಂಚೆಯೆ ನಿಮ್ಮ ಗಮನಕ್ಕೆ ತಂದಿದ್ದೆ.
“ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಬಿಇಎಲ್ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರಿಂದ ವಿದ್ಯುನ್ಮಾನ ಮತ ಯಂತ್ರಗಳ ಉತ್ಪಾದನೆ , ಸರಬರಾಜು ಹಾಗು ಇವಿಎಂ ಗಳಲ್ಲಿ ಮುಖ್ಯ ಪಾತ್ರವಹಿಸುವ ಚಿಪ್ ಗಳಲ್ಲಿ ಎಂಬೆಡ್ ಮಾಡುವ ರಹಸ್ಯ ಎನ್ಕ್ರಿಪ್ಟೆಡ್ ಕೋಡ್ ಗಳನ್ನು ರಚಿಸುವಲ್ಲಿ ನಿಕಟವಾಗಿ ತೊಡಗಿಸಿಕೊಂಡಿರುವ ಬಿಇಎಲ್ ನ ವ್ಯವಹಾರಗಳನ್ನು ಬಿಜೆಪಿಯೇ ನೋಡಿಕೊಳ್ಳುತ್ತಿದೆ ಎಂಬ ಭಾವನೆ ಬರುವಂತಾಗಿದೆ"
ನಾನು ಈ ಸಂಗತಿಯನ್ನು ಬಹಳಷ್ಟು ಹಿಂದೆಯೇ ಭಾರತೀಯ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರೂ, ಚುನಾವಣಾ ಆಯೋಗ ಮಾತ್ರ ತನಗೇ ತಿಳಿದಿರುವ ಕಾರಣಗಳಿಗಾಗಿ ಉದ್ದೇಶಪೂರ್ವಕವಾಗಿ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದೆ. ಆ ಮೂಲಕ ಚುನಾವಣಾ ಆಯೋಗವು ಚುನಾವಣೆಯಲ್ಲಿ ಸಮಾನವಾದ ಅವಕಾಶವನ್ನು ಒದಗಿಸಬೇಕು ಎಂಬ ಬಗ್ಗೆ ನಿಷ್ಕಾಳಜಿ ವಹಿಸಿದೆ. ಇದರಿಂದ ಚುನಾವಣೆಗಳನ್ನು ಆಡಳಿತಾರೂಢ ಬಿಜೆಪಿ ಪರವಾಗಿ ನಿರ್ದಾಕ್ಷಿಣ್ಯವಾಗಿ ಸಜ್ಜುಗೊಳಿಸಿದಂತಾಗಿದೆ.
ನಾನಿಂದು ಬಿಇಎಲ್ ಅಂತರ್ಜಾಲ ತಾಣವನ್ನು ಪರಿಶೀಲಿಸಿದಾಗ , ನನಗೆ ಕಸಿವಿಸಿಯಾಯಿತು . ಸ್ವತಂತ್ರ ನಿರ್ದೇಶಕರ ಪೈಕಿ ಒಬ್ಬರಾದ ಶ್ರೀ ಮನ್ಷುಕ್ ಭಾಯಿ ಶಮ್ಜಿಭಾಯಿ ಖಂಚಾರಿಯಾ ಕುರಿತು ಸ್ಪಷ್ಟವಾಗಿ ಹೀಗೆ ನಮೂದಿಸಿರುವುದು ಪತ್ತೆಯಾಯಿತು:
ಶ್ರೀ ಖಂಚಾರಿಯಾ ಅರ್ಹತೆ ಕುರಿತು ಪ್ರಶ್ನಿಸುವ ಯಾವ ಇರಾದೆಯೂ ನನಗೆ ಇಲ್ಲವಾದರೂ, ಬಿಜೆಪಿಯ ಪದಾಧಿಕಾರಿಯೊಬ್ಬರನ್ನು ಬಿಇಎಲ್ ಮಂಡಳಿಯ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ಚುನಾವಣಾ ಆಯೋಗದ ಪಾಲಿಗೆ ಯಾಕೆ ಆಕ್ಷೇಪಾರ್ಹವಾಗಿ ಕಾಣಿಸಲಿಲ್ಲ? ಕಂಪನಿಯ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಸ್ವತಂತ್ರ ನಿರ್ದೇಶಕರು ಪ್ರಮುಖ ಪಾತ್ರ ವಹಿಸಬೇಕಾದುದನ್ನು ಕಂಪನಿ ಕಾಯ್ದೆಯು ಕಡ್ಡಾಯಗೊಳಿಸಿದೆ. ಈ ತಕ್ಷಣದ ಪ್ರಕರಣದಲ್ಲಿ, ಈ ನಿರ್ದಿಷ್ಟ ಕಂಪನಿಯು ವಿಶೇಷವಾಗಿ, ವಿದ್ಯುನ್ಮಾನ ಮತ ಯಂತ್ರದ ತಂತ್ರಜ್ಞಾನ ಹಾಗೂ ತಿರುಚುವಿಕೆಯ ಅಪಾಯದ ಕುರಿತು ಟೀಕೆಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಉತ್ಪಾದಿಸಿ, ಪೂರೈಸುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.
ವಿದ್ಯುನ್ಮಾನ ಮತ ಯಂತ್ರಗಳ ಕುರಿತು ಕೇಳಿ ಬರುತ್ತಿರುವ ಪ್ರಶ್ನೆಗಳ ಕುರಿತು ಮರು ಪರಿಶೀಲಿಸುವ ಬದಲು ಭಾರತೀಯ ಚುನಾವಣಾ ಆಯೋಗವು ಅದನ್ನು ಸಮರ್ಥಿಸಿಕೊಳ್ಳುವ, ಅಕ್ಷರಶಃ ಅಲ್ಲಗಳೆಯುವ, ನಮ್ಮ ದೇಶದಂತೆಯೇ ಇತರ ದೇಶಗಳಲ್ಲೂ ವಿದ್ಯುನ್ಮಾನ ಯಂತ್ರಗಳು ತಪ್ಪಾಗಿ ಕಾರ್ಯನಿರ್ವಹಿಸಿರುವ ನಿದರ್ಶನದ ಕಾರಣಕ್ಕೆ ವಿದ್ಯುನ್ಮಾನ ಯಂತ್ರಗಳನ್ನು ಆ ದೇಶಗಳು ನಿಷೇಧಿಸಿರುವ ಕಟು ವಾಸ್ತವ ಸಂಗತಿಗೆ ಕುರುಡಾಗುವ ಅತಿರೇಕದ ಹಂತ ತಲುಪಿದೆ.
ವಿದ್ಯುನ್ಮಾನ ಮತ ಯಂತ್ರದ ಮತ ಎಣಿಕೆಯನ್ನು ಮತ ಪತ್ರದ ಎಣಿಕೆಯೊಂದಿಗೆ ತಾಳೆ ಮಾಡಬೇಕು ಎಂಬ ಮನವಿಯನ್ನು ಭಾರತೀಯ ಚುನಾವಣಾ ಆಯೋಗವು ತಳ್ಳಿ ಹಾಕುವ ಮೂಲಕ ಸಾರ್ವಜನಿಕರ ಆತಂಕವನ್ನು ದುಪ್ಪಟ್ಟುಗೊಳಿಸಿದೆ. ಚುನಾವಣಾ ಆಯೋಗವೇ ಒಪ್ಪಿಕೊಂಡಿರುವಂತೆ, ಅದು ಎಣಿಕೆ ಯಂತ್ರಗಳಿಲ್ಲದೆ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸುತ್ತಿದೆ. ಆ ಮೂಲಕ ಮತಗಟ್ಟೆ ಮಟ್ಟದ ಗೋಪ್ಯತೆಯನ್ನು ಉಲ್ಲಂಘಿಸುವ ಮೂಲಕ ಮತ ಕ್ಷೇತ್ರದ ವಿವಿಧ ಮತಗಟ್ಟೆಗಳ ಮತಗಳನ್ನು ಮಿಶ್ರಣ ಮಾಡುವುದರಿಂದ ತಡೆಯಲಾಗುತ್ತಿದೆ ಎಂಬುದು ಮನವರಿಕೆಯಾಗಿದೆ.
ಶ್ರೀ ಖಂಚಾರಿಯಾರೊಂದಿಗೆ ಇನ್ನೂ ಕನಿಷ್ಠ ಮೂರು ಮಂದಿ ಸ್ವತಂತ್ರ ನಿರ್ದೇಶಕರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ.
ಒಂದು ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿ, ವಿದ್ಯುನ್ಮಾನ ಮತ ಯಂತ್ರದ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಮಹತ್ವದ ಪಾತ್ರವನ್ನು ನೀಡಲಾಗಿದೆ ಎಂಬುದನ್ನು ಗಮನಿಸಿದಾಗ, ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಸ್ವತಂತ್ರ ನಿರ್ದೇಶಕರನ್ನಾಗಿಸುವ ಮೂಲಕ ಬಿಇಎಲ್ ಹಿತಾಸಕ್ತಿ ಸಂಘರ್ಷದೊಂದಿಗೆ ರಾಜಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ಈ ಸಂಗತಿಯು ಹಲವಾರು ವಿಷಯಗಳ ಕುರಿತು ಕಳವಳವನ್ನುಂಟು ಮಾಡುತ್ತದೆ:
1. ಶ್ರೀ ಖಂಚಾರಿಯಾರ ಬಿಜೆಪಿ ಹಿನ್ನೆಲೆಯನ್ನು ಬಿಇಎಲ್ ಅಂತರ್ಜಾಲ ತಾಣದಲ್ಲಿ ಹೆಮ್ಮೆಯಿಂದ ಪ್ರಕಟಿಸುವ ಮೂಲಕ, ಆಡಳಿತಾರೂಢ ರಾಜಕೀಯ ಪದಾಧಿಕಾರಿ ಹಾಗೂ ಬಿಇಎಲ್ ನ ಕಾರ್ಯನಿರ್ವಹಣೆಯ ನಡುವಿನ ಮಧ್ಯಂತರ ರೇಖೆಯು ಮಬ್ಬಾಗುತ್ತಿದೆ. ಸಂವಿಧಾನದ 12ನೇ ವಿಧಿಯ ಪ್ರಕಾರ, ಬಿಇಎಲ್ ಪ್ರಭುತ್ವದ ಅಸ್ತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ನಿರೀಕ್ಷಿಸಲಾಗಿದ್ದು, ಹೀಗಾಗಿ ಅದು ಪೂರೈಸುವ ವಿದ್ಯುನ್ಮಾನ ಮತ ಯಂತ್ರಗಳು ತಿರುಚುವಿಕೆಗೆ ದುರ್ಬಲವಾಗಿರಬಾರದು ಎಂಬುದನ್ನು ಖಾತ್ರಿಗೊಳಿಸಬೇಕಿದೆ.
2. ಚುನಾವಣಾ ಆಯೋಗದಿಂದ ಸಂಪೂರ್ಣವಾಗಿ ಅನುಮೋದನೆಗೊಂಡಿರುವ ಬಿಇಎಲ್, ತನ್ನ ಸೋರ್ಸ್ ಕೋಡ್ ಕುರಿತು ಸ್ವತಂತ್ರ ಪರಿಶೋಧನೆಗೆ ನಿರಾಕರಿಸುವ ಮೂಲಕ, ನಮ್ಮ ದೇಶದಲ್ಲಿ ಬಳಕೆಯಾಗುತ್ತಿರುವ ವಿದ್ಯುನ್ಮಾನ ಮತ ಯಂತ್ರಗಳ ಕುರಿತು ಸಾರ್ವಜನಿಕರು ವ್ಯಕ್ತಪಡಿಸುತ್ತಿರುವ ಕಳವಳ ಹಾಗೂ ಅದರ ತಿರುಚುವಿಕೆಯ ದುರ್ಬಲತೆ ಕುರಿತ ಪ್ರಶ್ನೆಗಳನ್ನು ತಳ್ಳಿ ಹಾಕಿದೆ.
3. ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಪ್ರಾಧಿಕಾರದ ಪಾತ್ರವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದಿರುವುದು ನನ್ನನ್ನು ತುಂಬಾ ಗೊಂದಲಕ್ಕೆ ದೂಡಿದೆ. ಅಲ್ಲದೆ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆಗಳನ್ನು ನಡೆಸಬೇಕಾದ ಹೊಣೆ ಹೊಂದಿರುವ ಚುನಾವಣಾ ಆಯೋಗವು, ಬಿಇಎಲ್ ನ ವ್ಯವಹಾರಗಳನ್ನು ಆಡಳಿತಾರೂಢ ಪಕ್ಷದ ನಾಲ್ವರು ಸ್ವತಂತ್ರ ಪ್ರತಿನಿಧಿಗಳು ನಡೆಸುತ್ತಿರುವುದಕ್ಕೆ ಕುರುಡಾಗುವ ಮೂಲಕ, ತಾನೇ ಆಡಳಿತಾರೂಢ ಪಕ್ಷದ ಪರವಾಗಿ ಬದಲಾಗಿದೆ. ಅಂದಮೇಲೆ, ಚುನಾವಣಾ ಆಯೋಗವೇ ತಾನು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರವಲ್ಲ ಎಂದು ಒಪ್ಪಿಕೊಂಡಂತಾಗಿದೆಯೆ?
4. ಬಿಇಎಲ್ ಮಂಡಳಿಯ ಸ್ಥಿತಿ ಕುರಿತು ಒಂದು ವರ್ಷಕ್ಕಿಂತ ಮುಂಚೆಯೇ ಚುನಾವಣಾ ಆಯೋಗದ ಗಮನಕ್ಕೆ ತಂದರೂ, ಇದರಿಂದ ಹಾಲಿ ನಿಯೋಜಿಸಲಾಗುತ್ತಿರುವ ವಿದ್ಯುನ್ಮಾನ ಮತ ಯಂತ್ರಗಳು ಹಾಗೂ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯೇ ನಾಶವಾಗಲಿದೆ ಎಂಬುದು ಆಯೋಗಕ್ಕೆ ಚೆನ್ನಾಗಿಯೇ ತಿಳಿದಿದ್ದರೂ , ಚುನಾವಣಾ ಆಯೋಗ ಮಾತ್ರ ಇಂತಹ ಲಜ್ಜೆಗೆಟ್ಟ ಹಿತಾಸಕ್ತಿ ಸಂಘರ್ಷದ ಪರವಾಗಿ ಉಳಿಯವುದನ್ನು ಆಯ್ಕೆ ಮಾಡಿಕೊಂಡಿದೆ.
324ನೇ ವಿಧಿಯಡಿ ಸ್ವತಃ ಚುನಾವಣಾ ಆಯೋಗಕ್ಕೆ ಏನಾದರೂ ಸ್ವಯಂಗೌರವವಿದ್ದರೆ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತು ಸಮಗ್ರತೆಯನ್ನು ಕಾಪಾಡುವ ಕಾಳಜಿ ಇದ್ದರೆ, ಬಿಇಎಲ್ ಮಂಡಳಿಯಿಂದ ಪಕ್ಷಕ್ಕೆ ಸಂಬಂಧಿಸಿರುವ ನಿರ್ದೇಶಕರನ್ನು ವಜಾಗೊಳಿಸಬೇಕು ಹಾಗೂ ತಾನು ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ದೇಶದ ಜನರಿಗೆ ತಿಳಿಯುವಂತೆ ಸಾರ್ವಜನಿಕ ತಾಣದಲ್ಲಿ ಪ್ರಕಟಿಸಬೇಕು.
ಸಂವಿಧಾನದ ವಿಧಿ 324ರ ಅಡಿ ಚುನಾವಣಾ ಆಯೋಗಕ್ಕೆ ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಪರಮಾಧಿಕಾರವಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿದೆ.
ಇಂತಹ ಪ್ರಮುಖ ವಿಷಯದಲ್ಲಿ ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ಚಲಾಯಿಸಲು ವಿಫಲವಾದರೆ, ಈಗಾಗಲೇ ಸಾರ್ವಜನಿಕರ ಟೀಕೆಗೆ ಗುರಿಯಾಗಿರುವ ಅದರ ವಿಶ್ವಾಸಾರ್ಹತೆ ಮತ್ತಷ್ಟು ನಾಶವಾಗಲಿದೆ. ಈ ಪರಿಸ್ಥಿತಿಯು ಭವಿಷ್ಯದ ನಮ್ಮ ಪ್ರಜಾಪ್ರಭುತ್ವಕ್ಕೆ ಒಳಿತಾಗುವುದಿಲ್ಲ.
ಈ ಪ್ರಕರಣದಲ್ಲಾದರೂ ಚುನಾವಣಾ ಆಯೋಗವು ದೇಶದ ಕೈಬಿಡುವುದಿಲ್ಲ ಎಂಬ ಪ್ರಾಮಾಣಿಕ ವಿಶ್ವಾಸ ಹೊಂದಿದ್ದೇನೆ!
ವಂದನೆಗಳು,
ನಿಮ್ಮ ವಿಶ್ವಾಸಿ,
ಇಎಎಸ್ ಶರ್ಮ