ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ ’ ಮತ್ತು ‘ಜಾತ್ಯತೀತ ’ಪದಗಳನ್ನು ಅಳಿಸಬಹುದೇ? : ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ
ಸರ್ವೋಚ್ಚ ನ್ಯಾಯಾಲಯ | Photo: PTI
ಹೊಸದಿಲ್ಲಿ : ಸಂವಿಧಾನದ ಪೀಠಿಕೆಯಲ್ಲಿನ 1949,ನ.26ರ ಅಂಗೀಕಾರ ದಿನಾಂಕವನ್ನು ಉಳಿಸಿಕೊಂಡು ಅದನ್ನು ತಿದ್ದುಪಡಿಗೊಳಿಸಬಹುದೇ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಪ್ರಶ್ನಿಸಿತು.
ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತಾ ಅವರ ಪೀಠವು ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ ’ ಮತ್ತು ‘ಜಾತ್ಯತೀತ ’ಪದಗಳನ್ನು ಅಳಿಸುವಂತೆ ಕೋರಿರುವ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತು ವಕೀಲ ವಿಷ್ಣುಶಂಕರ ಜೈನ್ ಅವರ ಮುಂದೆ ಈ ಪ್ರಶ್ನೆಯನ್ನಿರಿಸಿತು.
‘ತಿಳಿದುಕೊಳ್ಳುವ ಉದ್ದೇಶದಿಂದ ಈ ಪ್ರಶ್ನೆ, ಪೀಠಿಕೆಯಲ್ಲಿನ ಸಂವಿಧಾನ ಅಂಗೀಕಾರ ದಿನಾಂಕವನ್ನು ಹಾಗೆಯೇ ಉಳಿಸಿಕೊಂಡು ಅದನ್ನು ಬದಲಿಸಬಹುದೇ? ಉತ್ತರವು ಹೌದು ಎಂದಾಗಿದ್ದರೆ ಪೀಠಿಕೆಯನ್ನು ತಿದ್ದುಪಡಿ ಮಾಡಬಹುದು. ಅದರಲ್ಲಿ ಯಾವುದೇ ಸಮಸ್ಯೆಯಿಲ್ಲ ’ಎಂದು ನ್ಯಾ.ದತ್ತಾ ಹೇಳಿದಾಗ, ಇದು ಈ ವಿಷಯದಲ್ಲಿ ನಿಖರವಾದ ಪ್ರಶ್ನೆಯಾಗಿದೆ ಎಂದು ಸ್ವಾಮಿ ಹೇಳಿದರು.
‘ಇದು ಬಹುಶಃ ನಾನು ನೋಡಿರುವ, ದಿನಾಂಕವನ್ನು ಹೊಂದಿರುವ ಏಕೈಕ ಪೀಠಿಕೆಯಾಗಿದೆ. ಈ ದಿನಾಂಕದಂದು ನಾವು ಸಂವಿಧಾನವನ್ನು ನಮಗೆ ಕೊಟ್ಟುಕೊಂಡಿದ್ದೆವು. ಮೂಲತಃ ಈ ಎರಡು ಪದಗಳು (ಸಮಾಜವಾದಿ ಮತ್ತು ಜಾತ್ಯತೀತತೆ) ಅದರಲ್ಲಿ ಇರಲಿಲ್ಲ’ ಎಂದು ನ್ಯಾ.ದತ್ತಾ ಹೇಳಿದಾಗ,ಭಾರತೀಯ ಸಂವಿಧಾನದ ಪೀಠಿಕೆಯು ನಿರ್ದಿಷ್ಟ ದಿನಾಂಕವನ್ನು ಹೊಂದಿದೆ,ಹೀಗಾಗಿ ಚರ್ಚಿಸದೆ ಅದನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಜೈನ್ ತಿಳಿಸಿದರು.
ಮಧ್ಯಪ್ರವೇಶಿಸಿದ ಸ್ವಾಮಿ,42ನೇ ತಿದ್ದುಪಡಿ ಕಾಯ್ದೆಯನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ (1975-77) ಅಂಗೀಕರಿಸಲಾಗಿತ್ತು ಎಂದು ಹೇಳಿದರು.
‘ಇಂದು ಬೆಳಿಗ್ಗೆಯಷ್ಟೇ ನಾವು ಪ್ರಕರಣದ ಕಡತಗಳನ್ನು ಸ್ವೀಕರಿಸಿದ್ದೇವೆ ಮತ್ತು ಸಮಯದ ಅಭಾವದಿಂದಾಗಿ ಅವುಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ’ ಎಂದು ಆರಂಭದಲ್ಲಿ ನ್ಯಾ.ಖನ್ನಾ ಸ್ವಾಮಿಯವರಿಗೆ ತಿಳಿಸಿದರು.
ಈ ವಿಷಯದಲ್ಲಿ ವಿವರವಾದ ಚರ್ಚೆಯ ಅಗತ್ಯವಿದೆ ಎಂದು ಹೇಳಿದ ಪೀಠವು, ಸಲ್ಲಿಕೆಯಾಗಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಎ.29ಕ್ಕೆ ನಿಗದಿಗೊಳಿಸಿತು.
2022,ಸೆ.2ರಂದು ಸರ್ವೋಚ್ಚ ನ್ಯಾಯಾಲಯವು ಸ್ವಾಮಿಯವರ ಅರ್ಜಿಯನ್ನು ವಿಚಾರಣೆಗಾಗಿ ಬಾಕಿಯುಳಿದಿದ್ದ ಬಲರಾಮ ಸಿಂಗ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯೊಂದಿಗೆ ಸೇರಿಸಿತ್ತು.
ಪೀಠಿಕೆಯಿಂದ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಕೈಬಿಡುವಂತೆ ಸ್ವಾಮಿ ಮತ್ತು ಸಿಂಗ್ ಕೋರಿದ್ದಾರೆ.
ಇಂದಿರಾ ಗಾಂಧಿ ಸರಕಾರವು 1976ರಲ್ಲಿ ಮಂಡಿಸಿದ್ದ 42ನೇ ಸಂವಿಧಾನ ತಿದ್ದುಪಡಿಯಡಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಪೀಠಿಕೆಯಲ್ಲಿ ಸೇರಿಸಲಾಗಿತ್ತು.
ಈ ತಿದ್ದುಪಡಿಯು ಪೀಠಿಕೆಯಲ್ಲಿ ಭಾರತದ ವರ್ಣನೆಯನ್ನು‘ಸಾರ್ವಭೌಮ,ಪ್ರಜಾಸತ್ತಾತ್ಮಕ ಗಣರಾಜ್ಯ ’ದಿಂದ‘ಸಾರ್ವಭೌಮ,ಸಮಾಜವಾದಿ,ಜಾತ್ಯತೀತ,ಪ್ರಜಾಸತ್ತಾತ್ಮಕ ಗಣರಾಜ್ಯ’ಕ್ಕೆ ಬದಲಿಸಿತ್ತು.
ಇದನ್ನು ತನ್ನ ಅರ್ಜಿಯಲ್ಲಿ ಪ್ರಶ್ನಿಸಿರುವ ಸ್ವಾಮಿ, ಪೀಠಿಕೆಯನ್ನು ಬದಲಿಸಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.
ಪೀಠಿಕೆಯು ಸಂವಿಧಾನದ ಅಗತ್ಯ ಲಕ್ಷಣಗಳನ್ನು ಮಾತ್ರವಲ್ಲ,ಏಕೀಕೃತ ಸಮಗ್ರ ಸಮುದಾಯವನ್ನು ಸೃಷ್ಟಿಸಲು ಅದನ್ನು ಅಳವಡಿಸಿಕೊಳ್ಳಲು ಆಧಾರವಾಗಿರುವ ಮೂಲಭೂತ ಷರತ್ತುಗಳನ್ನೂ ಸೂಚಿಸುತ್ತದೆ ಎಂದು ಹೇಳಿದ್ದಾರೆ.