ಅನುಮಾನದ ಆಧಾರದಲ್ಲಿ ಇವಿಎಂ ಗಳ ವಿರುದ್ಧ ನಾವು ನಿರ್ದೇಶನಗಳನ್ನು ನೀಡಬಹುದೇ?: ಸುಪ್ರೀಂ ಕೋರ್ಟ್
ಇವಿಎಂ , ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಯಾವುದೇ ದೃಢವಾದ ಪುರಾವೆಯಿಲ್ಲದಿದ್ದರೂ ಕೇವಲ ಹ್ಯಾಕಿಂಗ್ ಮತ್ತು ತಿರುಚುವಿಕೆಯ ಅನುಮಾನದ ಆಧಾರದಲ್ಲಿ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನಾವು ನೀಡಬಹುದೇ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಚುನಾವಣೆಗಳಲ್ಲಿ ಇವಿಎಂ ಗಳ ಮೂಲಕ ಚಲಾಯಿಸಲಾದ ಮತಗಳೊಂದಿಗೆ ವಿವಿಪ್ಯಾಟ್ ರಶೀದಿಗಳನ್ನು ತಾಳೆ ಹಾಕಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಅರ್ಜಿಗಳು ಇವಿಎಂ ಗಳು ಹ್ಯಾಕ್ ಪ್ರೂಫ್ ಆಗಿವೆಯೇ ಎಂಬ ಅನುಮಾನಗಳನ್ನೂ ಎತ್ತಿವೆ.
ಬುಧವಾರ ಚುನಾವಣಾ ಆಯೋಗವು ಮೈಕ್ರೋಕಂಟ್ರೋಲರ್ ಗಳ ಫ್ಲ್ಯಾಷ್ ಮೆಮಾರಿಯನ್ನು ಮರುಪ್ರೋಗ್ರಾಮ್ ಮಾಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡಿತು.
‘ಅನುಮಾನದ ಆಧಾರದಲ್ಲಿ ನಾವು ಆದೇಶವನ್ನು ಹೊರಡಿಸಬಹುದೇ? ನೀವು ನೆಚ್ಚಿಕೊಂಡಿರುವ ವರದಿಯು ಇನ್ನೂ ಹ್ಯಾಕಿಂಗ್ ಘಟನೆ ನಡೆದಿಲ್ಲ ಎಂದು ಹೇಳುತ್ತಿದೆ. ನಾವು ಇನ್ನೊಂದು ಸಾಂವಿಧಾನಿಕ ಪ್ರಾಧಿಕಾರದ ನಿಯಂತ್ರಕ ಪ್ರಾಧಿಕಾರವಲ್ಲ. ನಾವು ಚುನಾವಣೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ವಿವಿಪ್ಯಾಟ್ ಬಳಸುವಂತೆ ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು ಮತ್ತು ಅದನ್ನು ಪಾಲಿಸಲಾಗಿದೆ. ಆದರೆ ಎಲ್ಲ ಸ್ಲಿಪ್ ಗಳನ್ನು ತಾಳೆ ಹಾಕುವಂತೆ ಅದು ಎಲ್ಲಿ ಹೇಳಿದೆ? 2019,ಎ.8ರ ತೀರ್ಪಿನಲ್ಲಿ ಅದು ಶೇ.5ರಷ್ಟು ಸ್ಲಿಪ್ ಗಳನ್ನು ತಾಳೆ ಹಾಕುವಂತೆ ಅದು ತಿಳಿಸಿತ್ತು. ಈ ಶೇ.5ನ್ನು ಹೊರತುಪಡಿಸಿ ಯಾವುದೇ ಅಭ್ಯರ್ಥಿ ದುರ್ಬಳಕೆಯ ನಿದರ್ಶನಗಳಿವೆ ಎಂದು ಹೇಳಿದರೆ ಆಗ ನೋಡೋಣ ’ ಎಂದು ಪೀಠವು ಅರ್ಜಿದಾರರಿಗೆ ತಿಳಿಸಿತು.
ಮತಪತ್ರಗಳಿಗೆ ಮರಳುವ ಪ್ರಶ್ನೆಯೇ ಇಲ್ಲವಾದ್ದರಿಂದ ಇವಿಎಂ ವ್ಯವಸ್ಥೆಯನ್ನು ಬಲಗೊಳಿಸಲು ನಿರ್ದೇಶನಗಳನ್ನು ಹೊರಡಿಸುವುದನ್ನು ತಾನು ಪರಿಗಣಿಸುವುದಾಗಿಯೂ ನ್ಯಾಯಾಲಯವು ಹೇಳಿತು.
ಪ್ರತಿಯೊಂದೂ ಇವಿಎಂ ಮತವನ್ನು ವಿವಿಪ್ಯಾಟ್ ಸ್ಲಿಪ್ ಗಳ ಜೊತೆ ತಾಳೆ ಹಾಕಬೇಕು ಎಂದು ಅರ್ಜಿದಾರರೋರ್ವರು ಕೋರಿದ್ದಾರೆ.
ತಾವು ಚಲಾಯಿಸಿದ ಮತವು ತಾವು ಆಯ್ಕೆ ಮಾಡಿದ ಅಭ್ಯರ್ಥಿಯ ಪರವಾಗಿಯೇ ಎಣಿಕೆಯಾಗಿದೆ ಎನ್ನುವುದನ್ನು ನಾಗರಿಕರು ದೃಢಪಡಿಸಿಕೊಳ್ಳಲು ವಿವಿಪ್ಯಾಟ್ ಸ್ಲಿಪ್ ಗಳನ್ನು ಇವಿಎಂ ಮತಗಳೊಂದಿಗೆ ತಾಳೆ ಹಾಕಬೇಕು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ (ಎಡಿಆರ್) ಸಲ್ಲಿಸಿರುವ ಅರ್ಜಿಯು ಹೇಳಿದೆ.
ಸರ್ವೋಚ್ಚ ನ್ಯಾಯಾಲಯವು ಎ.18ರಂದು ಈ ವಿಷಯದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಪ್ರತಿಯೊಂದನ್ನೂ ಅನುಮಾನದ ದೃಷ್ಟಿಯಿಂದ ನೋಡಲಾಗುವುದಿಲ್ಲ ಮತ್ತು ಅರ್ಜಿದಾರರು ಇವಿಎಮ್ನ ಪ್ರತಿಯೊಂದೂ ಅಂಶವನ್ನು ಟೀಕಿಸಬೇಕಿಲ್ಲ ಎಂದು ಆಗ ಹೇಳಿದ್ದ ಪೀಠವು,ಕೆಲವು ಸ್ಪಷ್ಟೀಕರಣಗಳಿಗಾಗಿ ವಿಚಾರಣೆಯನ್ನು ಇಂದಿಗೆ ನಿಗದಿಗೊಳಿಸಿತ್ತು.
ಬುಧವಾರದ ವಿಚಾರಣೆ ಸಂದರ್ಭದಲ್ಲಿ ಪೀಠವು, ಮೈಕ್ರೋಕಂಟ್ರೋಲರ್ ಅನ್ನು ವಿವಿಪ್ಯಾಟ್ನ ಕಂಟ್ರೋಲಿಂಗ್ ಯೂನಿಟ್ನೊಳಗೆ ಅಳವಡಿಸಲಾಗಿದೆಯೇ? ಮೈಕ್ರೋಕಂಟ್ರೋಲರ್ ಅನ್ನು ಮರು ಪ್ರೋಗ್ರಾಂ ಮಾಡಬಹುದೇ? ಇವಿಎಮ್ಗಳ ದಾಸ್ತಾನು ಮತ್ತಿತರ ಅಂಶಗಳ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆಯನ್ನು ಕೇಳಿತು.
ಚುನಾವಣಾ ಆಯೋಗದಿಂದ ಈ ಬಗ್ಗೆ ಸ್ಪಷ್ಟನೆಗಳನ್ನು ಪಡೆದುಕೊಂಡ ಬಳಿಕ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತು.