ಕೆನಡಾ ವಿವಾದ; ನಮ್ಮ ಕಳವಳವನ್ನು ಸ್ಪಷ್ಟವಾಗಿ ಅಮೆರಿಕಕ್ಕೆ ತಿಳಿಸಿದ್ದೇವೆ ಎಂದ ಕೇಂದ್ರ
ಹೊಸದಿಲ್ಲಿ: ಕೆನಡಾದಲ್ಲಿ ಖಾಲಿಸ್ತಾನಿ ಪರ ಶಕ್ತಿಗಳ ಹೆಚ್ಚುತ್ತಿರುವ ಚಟುವಟಿಕೆಗಳ ಕುರಿತು ತನ್ನ ಗಂಭೀರ ಕಳವಳವನ್ನು ಭಾರತವು ಶುಕ್ರವಾರ ಅಮೆರಿಕಕ್ಕೆ ತಿಳಿಸಿದೆ.
‘ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ವಿದೇಶಾಂಗ ಸಚಿವ ಮತ್ತು ರಕ್ಷಣಾ ಸಚಿವರೊಂದಿಗೆ ಮಾತುಕತೆಗಳ ಸಂದರ್ಭದಲ್ಲಿ ನಮ್ಮ ಕಳವಳವನ್ನು ಅತ್ಯಂತ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದೇವೆ’ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾತ್ರಾ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಮಾತುಕತೆಗಳಲ್ಲಿ ಅಮೆರಿಕ ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಮತ್ತು ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಅವರು ವಹಿಸಿದ್ದರೆ ಭಾರತೀಯ ನಿಯೋಗದ ನೇತೃತ್ವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ವಹಿಸಿದ್ದರು.
‘ನಾವು ಪ್ರಮುಖ ಭದ್ರತಾ ಕಳವಳಗಳನ್ನು ಹೊಂದಿದ್ದೇವೆ ಮತ್ತು ಖಾಲಿಸ್ತಾನ ಬೆಂಬಲಿಗನೋರ್ವನ ಇತ್ತೀಚಿನ ವೀಡಿಯೊವೊಂದರ ಬಗ್ಗೆ ನಿಮಗೆ ತಿಳಿದಿದೆ ಎಂದು ನನಗೆ ಖಾತ್ರಿಯಿದೆ ’ ಎಂದು ಸುದ್ದಿಗಾರರಿಗೆ ಹೇಳಿದ ಕ್ವಾತ್ರಾ, ಭಾರತ ಸರಕಾರದ ಕಳವಳಗಳನ್ನು ಅಮೆರಿಕ ನಿಯೋಗವು ಅರ್ಥ ಮಾಡಿಕೊಂಡಿದೆ ಎಂದು ತಿಳಿಸಿದರು.
ಕಳೆದ ಜೂನ್‌ನಲ್ಲಿ ಕೆನಡಾದ ಸರ್ರೆಯಲ್ಲಿ ನಡೆದ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತೀಯ ಏಜೆಂಟರ ಕೈವಾಡವಿತ್ತು ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಅವರು ದೇಶದ ಸಂಸತ್ತಿನಲ್ಲಿ ಆರೋಪಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಜಸ್ಟಿನ್ ಆರೋಪಗಳನ್ನು ಭಾರತವು ಸ್ಪಷ್ಟವಾಗಿ ನಿರಾಕರಿಸಿದೆ.