ಕೆನಡಾ | ಭಾರತ ಮೂಲದ ವಿದ್ಯಾರ್ಥಿಯ ಇರಿದು ಹತ್ಯೆ
ಗುರಾಸಿಸ್ ಸಿಂಗ್ (Photo credit: NDTV)
ಹೊಸದಿಲ್ಲಿ: ಭಾರತ ಮೂಲದ ವಿದ್ಯಾರ್ಥಿಯನ್ನು ಇರಿದು ಹತ್ಯೆಗೈದಿರುವ ಘಟನೆ ಕೆನಡಾದ ಒಂಟಾರಿಯೊದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯ ನಿವಾಸದಲ್ಲೇ ವಾಸವಿದ್ದ ಆರೋಪಿಯನ್ನು ಬಂಧಿಸಲಾಗಿದೆ.
22 ವರ್ಷದ ಗುರಾಸಿಸ್ ಸಿಂಗ್ ಮೃತ ವಿದ್ಯಾರ್ಥಿ.
ಲ್ಯಾಂಬ್ಟನ್ ಕಾಲೇಜಿನಲ್ಲಿ ಮೊದಲನೆ ವರ್ಷದ ಬಿಸಿನೆಸ್ ಮ್ಯಾನೇಜ್ ಮೆಂಟ್ ಪದವಿ ವಿದ್ಯಾರ್ಥಿಯಾಗಿದ್ದ ಗುರಾಸಿಸ್ ಸಿಂಗ್ ಅನ್ನು ಆತನ ಕೋಣೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ 36 ವರ್ಷದ ಕ್ರಾಸ್ಲೀ ಹಂಟರ್ ಎಂಬ ವ್ಯಕ್ತಿ ರವಿವಾರ ಚೂರಿಯಿಂದ ಇರಿದಿದ್ದಾನೆ. ಅಡುಗೆ ಕೋಣೆಯಲ್ಲಿ ಇಬ್ಬರ ನಡುವಿನ ದೈಹಿಕ ಘರ್ಷಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ತನ್ನ ಕೈಗೆ ಸಿಕ್ಕ ಚೂರಿಯಿಂದ ಗುರಾಸಿಸ್ ಸಿಂಗ್ ಗೆ ಕ್ರಾಸ್ಲಿ ಹಂಟರ್ ಹಲವು ಬಾರಿ ತಿವಿದು ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.
ಸಾರ್ನಿಯಾದ ಕ್ವೀನ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಚೂರಿ ಇರಿತದ ಘಟನೆ ನಡೆದಿದೆ ಎಂಬ ಮಾಹಿತಿಯನ್ನು ಡಿಸೆಂಬರ್ 1ರ ಬೆಳಗ್ಗೆ ಪೊಲೀಸರು ಸ್ವೀಕರಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಎರಡನೆ ದರ್ಜೆಯ ಹತ್ಯೆ ದೋಷಾರೋಪ ಹೊರಿಸಲಾಗಿದ್ದು, ಶನಿವಾರ ಆತನನ್ನು ಜುಡಿಷಿಯಲ್ ಅಧಿಕಾರಿಯ ಮುಂದೆ ಹಾಜರುಪಡಿಸಲಾಗುತ್ತದೆ.