ಹರ್ದೀಪ್ ನಿಜ್ಜಾರ್ನ ಮರಣ ಪ್ರಮಾಣ ಪತ್ರವನ್ನು ಕೆನಡಾ ಇನ್ನೂ ಹಂಚಿಕೊಂಡಿಲ್ಲ : ಅಧಿಕಾರಿಗಳು

ಹರ್ದೀಪ್ ನಿಜ್ಜಾರ್ | PC : NDTV
ಹೊಸದಿಲ್ಲಿ : ಖಾಲಿಸ್ತಾನ ಪರ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ನ ಮರಣ ಪ್ರಮಾಣ ಪತ್ರಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಮನವಿಯನ್ನು ಕೆನಡಾ ಸತತವಾಗಿ ತಿರಸ್ಕರಿಸುತ್ತಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ನಿಜ್ಜಾರ್ ಭಾಗಿಯಾದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಈ ಮರಣ ಪ್ರಮಾಣ ಪತ್ರ ಅಗತ್ಯವಾಗಿದೆ ಎಂದು ಎನ್ಐಎ ಒಟ್ಟಾವದಲ್ಲಿರುವ ಅಧಿಕಾರಿಗಳಿಗೆ ತಿಳಿಸಿದ ಹೊರತಾಗಿಯೂ ಮನವಿಗೆ ಕೆಲವು ಇತರ ನಿರ್ದಿಷ್ಟ ಕಾರಣಗಳನ್ನು ಒದಗಿಸಿ ಎಂದು ಸೂಚಿಸುವುದನ್ನು ಮುಂದುವರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ನಿಜ್ಜಾರ್ನನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು ಎಂದು ಕೆನಡಾ ಸರಕಾರ ಕಳೆದ ವರ್ಷ ಜೂನ್ನಲ್ಲಿ ಘೋಷಿಸಿತ್ತು.
ಕೆನಡಾದ ಪೌರತ್ವ ಹೊಂದಿರುವ ನಿಜ್ಜಾರ್ ನನ್ನು ಕೇಂದ್ರ ಗೃಹ ಸಚಿವಾಲಯ 2020ರಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ)ಯ ನಿಯಮಗಳ ಅಡಿಯಲ್ಲಿ ‘‘ಗುರುತಿಸಲಾದ ಭಯೋತ್ಪಾದಕ’’ ಎಂದು ಘೋಷಿಸಿತ್ತು.
ನಿಜ್ಜಾರ್ನ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂಬ ವಿಶ್ವಾಸಾರ್ಹ ಮಾಹಿತಿ ತನ್ನಲ್ಲಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೆನಡಾ ಸಂಸತ್ತಿನಲ್ಲಿ ಕಳೆದ ವರ್ಷ ಆರೋಪಿಸಿದ ಬಳಿಕ ಭಾರತ ಹಾಗೂ ಕೆನಡಾ ಸಂಬಂಧ ಹಳಸಿತ್ತು.
ಈ ಎಲ್ಲಾ ಆರೋಪಗಳನ್ನು ಭಾರತ ನಿರಾಕರಿಸಿತ್ತು. ಈ ಆರೋಪಗಳನ್ನು ಅಸಂಬದ್ಧ ಹಾಗೂ ಪ್ರೇರಿತ ಎಂದು ಕರೆದಿತ್ತು. ಕೆನಡಾ ಭಾರತ ವಿರೋಧಿ ಶಕ್ತಿಗಳು ಹಾಗೂ ಉಗ್ರಗಾಮಿಗಳಿಗೆ ಅವಕಾಶ ನೀಡುತ್ತಿದೆ ಎಂದು ಆರೋಪಿಸಿತ್ತು.