ಎನ್ಜಿಒಗಳ ವಿದೇಶಿ ದೇಣಿಗೆ ಪರವಾನಿಗೆಗಳ ರದ್ದತಿ: ಆರ್ಟಿಐ ಅರ್ಜಿಗೆ ಸ್ಪಷ್ಟ ಉತ್ತರ ನೀಡದ ಕೇಂದ್ರ ಗೃಹ ಸಚಿವಾಲಯ
Photo: PTI
ಹೊಸದಿಲ್ಲಿ: ಲಾಭೋದ್ದೇಶವಿಲ್ಲದ ಸರಕಾರೇತರ ಸಂಸ್ಥೆ (ಎನ್ಜಿಒ)ಗಳ ವಿದೇಶಿ ದೇಣಿಗೆ ಪರವಾನಿಗೆಗಳ ರದ್ದತಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಆರ್ಟಿಐ ಅರ್ಜಿಯೊಂದಕ್ಕೆ ಸ್ಪಷ್ಟ ಉತ್ತರ ನೀಡುವುದರಿಂದ ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ)ವು ನುಣುಚಿಕೊಂಡಿದೆ ಎಂದು scroll.in ವರದಿ ಮಾಡಿದೆ.
ಕಳೆದ ಮಾರ್ಚ್ 15ರಂದು ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು, 2018 ಮತ್ತು 2022ರ ನಡುವೆ ಎಫ್ಸಿಆರ್ಎ ಮತ್ತು ನಿಯಮಗಳ ಉಲ್ಲಂಘನೆಗಾಗಿ 1,827 ಎನ್ಜಿಒಗಳ ವಿದೇಶಿ ದೇಣಿಗೆ ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ತಿಳಿಸಿದ್ದರು. ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಈ ಎನ್ಜಿಒಗಳು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ)ಯಡಿ ನೋಂದಣಿಯನ್ನು ಹೊಂದಿರುವುದು ಅಗತ್ಯವಾಗಿದೆ.
ಮಾ.16ರಂದು ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ (ಸಿಎಚ್ಆರ್ಐ)ನ ನಿರ್ದೇಶಕ ವೆಂಕಟೇಶ ನಾಯಕ್ ಅವರು ಎಲ್ಲ 1827 ರದ್ದತಿ ಆದೇಶಗಳನ್ನು ತನಗೆ ಲಭ್ಯವಾಗಿಸುವಂತೆ ಕೋರಿ ಆರ್ಟಿಐ ಕಾಯ್ದೆಯಡಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಅವುಗಳನ್ನು ಎಫ್ಸಿಆರ್ಎ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವಂತೆ ಮತ್ತು ಯುಆರ್ಎಲ್ಗಳನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ಅವರು ಗೃಹ ಸಚಿವಾಲಯವನ್ನು ಅರ್ಜಿಯಲ್ಲಿ ಕೋರಿಕೊಂಡಿದ್ದರು.
ಆದರೆ ಸಚಿವಾಲಯವು ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲ. ಬದಲಿಗೆ 90 ದಿನಗಳ ವಿಳಂಬದ ಬಳಿಕ ನೀಡಿರುವ ಬಳಿಕ ಪ್ರತಿಕ್ರಿಯಿಸಿ, 2018ರಿಂದ ವಿದೇಶಿ ದೇಣಿಗೆಗಳ ಪರವಾನಿಗೆಗಳು ರದ್ದುಗೊಂಡಿರುವ 1,808 ಎನ್ಜಿಒಗಳ ವಿವರಗಳು ಎಫ್ಸಿಆರ್ಎ ವೆಬ್ಸೈಟ್ ನಲ್ಲಿ ಲಭ್ಯವಿದೆ ಎಂದು ನಾಯಕ್ ಅವರಿಗೆ ತಿಳಿಸಿತ್ತು.
ಆದರೆ ವೆಬ್ಸೈಟ್ ನಲ್ಲಿ 2019, ಅಕ್ಟೋಬರ್ ನಲ್ಲಿ ವಿದೇಶಿ ದೇಣಿಗೆ ಪರವಾನಿಗೆ ರದ್ದುಗೊಳಿಸಲಾಗಿರುವ ಒಂದು ಆದೇಶ ಮಾತ್ರ ಲಭ್ಯವಿದ್ದು,1,808 ಎನ್ಜಿಒಗಳನ್ನು ಪಟ್ಟಿ ಮಾಡಲಾಗಿದೆ. ನಾಯಕ್ ಕೋರಿದ್ದಂತೆ ಪ್ರತಿ ಎನ್ಜಿಒದ ಪರವಾನಿಗೆ ರದ್ದತಿಯ ವಿವರಗಳು ಅದರಲ್ಲಿಲ್ಲ.
ವಿವಿಧ ಉಲ್ಲಂಘನೆಗಳ ನೆಪದಲ್ಲಿ,ತನ್ನನ್ನು ಟೀಕಿಸುವ ಎನ್ಜಿಒಗಳು, ಚಿಂತನ ಚಾವಡಿಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳ ಎಫ್ಸಿಆರ್ಎ ನೋಂದಣಿಗಳನ್ನು ರದ್ದುಗೊಳಿಸುತ್ತಿರುವ ಸರಕಾರದ ದಾಳಿಯ ನಡುವೆಯೇ ರದ್ದತಿ ಆದೇಶಗಳನ್ನು ಬಹಿರಂಗಗೊಳಿಸಲು ಸಚಿವಾಲಯದ ನಿರಾಕರಣೆಯು ಹೊರಬಿದ್ದಿದೆ.
ರದ್ದುಗೊಂಡಿರುವ ಪರವಾನಿಗೆಗಳಲ್ಲಿ ಸಿಎಚ್ಆರ್ಐನ ಪರವಾನಿಗೆಯೂ ಸೇರಿದೆ. ರದ್ದತಿ ಆದೇಶದ ಪ್ರತಿಯನ್ನು ತನ್ನ ಸಂಸ್ಥೆಯು ಸ್ವೀಕರಿಸಿದೆ, ಆದರೆ ವಾಡಿಕೆಯಂತೆ ಅದರ ವಿವರಗಳನ್ನು ಎಫ್ಸಿಆರ್ಎ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿಲ್ಲ ಎಂದು ನಾಯಕ್ ಸುದ್ದಿಸಂಸ್ಥೆಗೆ ತಿಳಿಸಿದರು.
ನಾಯಕ್ ಅವರು ಗೃಹ ಸಚಿವಾಲಯದಿಂದ ಉತ್ತರವನ್ನು ಸ್ವೀಕರಿಸಿದ ಕೆಲವು ದಿನಗಳ ಬಳಿಕ ವೆಬ್ಸೈಟ್ ನಲ್ಲಿಯ ವಿದೇಶಿ ದೇಣಿಗೆಗಳ ಪರವಾನಿಗೆಗಳು ರದ್ದುಗೊಂಡಿರುವ ಎನ್ಜಿಒಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, 2023ರಲ್ಲಿ ಪರವಾನಿಗೆಗಳು ರದ್ದಾಗಿರುವ ಮೂರು ಸಂಸ್ಥೆಗಳನ್ನು ಸೇರಿಸಲಾಗಿದೆ.
ಕಳೆದ ವರ್ಷದ ವರೆಗೂ ಎಫ್ಸಿಆರ್ಎ ಎನ್ಜಿಒಗಳ ಕುರಿತು ವಿವರವಾದ ಮಾಹಿತಿಗಳನ್ನು ಒಳಗೊಂಡಿತ್ತು. ಆದರೆ ಕಳೆದ ವರ್ಷದ ಜುಲೈನಲ್ಲಿ ವರದಿಗಳು ವೆಬ್ಸೈಟ್ನಿಂದ ಹೆಚ್ಚಿನ ಎಲ್ಲ ವಿವರಗಳನ್ನು ಅಳಿಸಲಾಗಿದೆ ಎಂದು ಹೇಳಿದ್ದವು. ಕಳೆದ ವರ್ಷದ ಮೇ ತಿಂಗಳಿನಲ್ಲಿ ಗೃಹ ಸಚಿವಾಲಯದ ಎಫ್ಸಿಆರ್ಎ ವಿಭಾಗದ ಅಧಿಕಾರಿಗಳು ಭಾಗಿಯಾಗಿದ್ದ ಲಂಚ ಹಗರಣವೊಂದನ್ನು ಸಿಬಿಐ ಭೇದಿಸಿದ ವಾರಗಳ ಬಳಿಕ ಈ ಮಾಹಿತಿಗಳು ವೆಬ್ಸೈಟ್ನಿಂದ ಮಾಯವಾಗಿವೆ.
ಗೃಹ ಸಚಿವಾಲಯವು ಪರವಾನಿಗೆಗಳು ನವೀಕರಣಗೊಂಡಿರುವ ಸಂಸ್ಥೆಗಳು ಸೇರಿದಂತೆ ಎನ್ಜಿಒಗಳ ಕುರಿತು ಮಾಹಿತಿಗಳನ್ನು ತಡೆಹಿಡಿಯಲು ಭ್ರಷ್ಟಾಚಾರ ಹಗರಣವನ್ನು ನೆಪವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ನಾಯಕ್, ಮಾಹಿತಿಗಳನ್ನು ಬಚ್ಚಿಡುವ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.