ಡಬ್ಲ್ಯುಎಫ್ಐ ಚುನಾವಣೆಗೆ ಹೈಕೋರ್ಟ್ ನ ತಡೆಯಾಜ್ಞೆ ರದ್ದು ; ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟ (WFI)ದ ಕಾರ್ಯಕಾರಿ ಮಂಡಳಿ ಚುನಾವಣೆಗಳಿಗೆ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ವಿಧಿಸಿದ್ದ ತಡೆಯಾಜ್ಞೆಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ರದ್ದುಗೊಳಿಸಿದೆ.
ಉಚ್ಚ ನ್ಯಾಯಾಲಯವು ಚುನಾವಣೆಗಳನ್ನು ನಡೆಸಲು ಅವಕಾಶ ನೀಡಬೇಕಿತ್ತು,ಆದರೆ ಅದು ಪ್ರಕರಣದ ಫಲಿತಾಂಶಕ್ಕೂ ಚುನಾವಣೆಗಳಿಗೂ ತಳುಕು ಹಾಕಿತ್ತು ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಪಂಕಜ ಮಿತ್ತಲ್ ಅವರ ಪೀಠವು ಹೇಳಿತು.
ಹರ್ಯಾಣ ಕುಸ್ತಿ ಸಂಘ (HWA)ವು ಸಲ್ಲಿಸಿದ್ದ ಅರ್ಜಿಗೆ ಸ್ಪಂದಿಸಿದ್ದ ಉಚ್ಚ ನ್ಯಾಯಾಲಯವು ಚುನಾವಣೆಗಳಿಗೆ ತಡೆಯಾಜ್ಞೆಯನ್ನು ನೀಡಿತ್ತು. ಚುನಾವಣೆಗಳಲ್ಲಿ ಮತಗಳನ್ನು ಚಲಾಯಿಸಲು ಹರ್ಯಾಣ ಹವ್ಯಾಸಿ ಕುಸ್ತಿ ಸಂಘಕ್ಕೆ ಅವಕಾಶ ನೀಡುವ ನಿರ್ಧಾರವನ್ನು ಎಚ್ ಡಬ್ಲ್ಯು ಎ ಪ್ರಶ್ನಿಸಿತ್ತು.
ನಂತರ ಡಬ್ಲ್ಯುಎಫ್ಐನ ತಾತ್ಕಾಲಿಕ ಸಮಿತಿಯು ಉಚ್ಚ ನ್ಯಾಯಾಲಯದ ತಡೆಯಾಜ್ಞೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಡಬ್ಲ್ಯುಎಫ್ ಮುಖ್ಯಸ್ಥರಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಗಳ ಬಳಿಕ ಎಪ್ರಿಲ್ ನಲ್ಲಿ ತಾತ್ಕಾಲಿಕ ಸಮಿತಿಯನ್ನು ರಚಿಸಲಾಗಿತ್ತು.
ತಾತ್ಕಾಲಿಕ ಸಮಿತಿಗೆ ಕಾರ್ಯಕಾರಿ ಮಂಡಳಿ ಚುನಾವಣೆ ನಡೆಸುವ ಮತ್ತು ಅಲ್ಲಿಯವರೆಗೆ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ವಹಿಸಲಾಗಿತ್ತು.
ಸರ್ವೋಚ್ಚ ನ್ಯಾಯಾಲಯವು ಡಬ್ಲ್ಯುಎಫ್ಐ ಚುನಾವಣೆಗಳನ್ನ ನಡೆಸಲು ಮಂಗಳವಾರ ಹಸಿರು ನಿಶಾನೆಯನ್ನು ತೋರಿಸಿತಾದರೂ ಫಲಿತಾಂಶ ಪ್ರಕಟಣೆಯು ಉಚ್ಚ ನ್ಯಾಯಾಲಯದಲ್ಲಿ ಬಾಕಿಯಿರುವ ರಿಟ್ ಅರ್ಜಿಯ ಮೇಲೆ ಹೊರಡಿಸಲಾಗುವ ಆದೇಶಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿತು.