ಅಭ್ಯರ್ಥಿಗಳಿಗೆ ಮತಗಟ್ಟೆ ಸಿಸಿಟಿವಿ ದೃಶ್ಯಾವಳಿ ಸಿಗದು: ಚುನಾವಣಾ ಆಯೋಗ
PC: PTI
ಹೊಸದಿಲ್ಲಿ: ಚುನಾವಣೆಯ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಯನ್ನು ಅಭ್ಯರ್ಥಿಗಳಿಗೆ ನೀಡುವ ಅಥವಾ ಸಾರ್ವಜನಿಕರಿಗೆ ಬಹಿರಂಗಪಡಿಸುವ ವರ್ಗದಲ್ಲಿ ಸೇರಿಸುವಂತಿಲ್ಲ ಎಂದು ನಿರ್ದಿಷ್ಟಪಡಿಸುವುದೂ ಸೇರಿದಂತೆ ಚುನಾವಣಾ ನಿಯಮಾವಳಿಗಳಲ್ಲಿ ಆಯೋಗ ಹಲವು ಬದಲಾವಣೆಗಳನ್ನು ಪ್ರಕಟಿಸಿದೆ.
ಈ ತಿದ್ದುಪಡಿಗೆ ಮುನ್ನ ಚುನಾವಣೆ ನಡೆಸು ನಿಯಮಾವಳಿಯ ಸೆಕ್ಷನ್ 93(2) ಅನ್ವಯ ನ್ಯಾಯಾಲಯದ ಅನುಮತಿಯ ಬಳಿಕ ಚುನಾವಣೆಗೆ ಸಂಬಂಧಿಸಿದ ಎಲ್ಲ ಕಾಗದಪತ್ರಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದ್ದವು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, "ಮೋದಿ ಸರ್ಕಾರ ಹಾಗೂ ಚುನಾವಣಾ ಆಯೋಗ ಪಾರದರ್ಶಕತೆಗೆ ಧಕ್ಕೆ ತರುತ್ತಿದೆ ಮತ್ತು ಚುನಾವಣಾ ಪ್ರಕ್ರಿಯೆಯ ನಿಷ್ಠೆಯನ್ನು ಅಳಿಸಿಹಾಕುತ್ತಿದೆ" ಎಂದು ದೂರಿದೆ. ಆದರೆ ಮತದಾರರ ಖಾಸಗಿತನವನ್ನು ರಕ್ಷಿಸುವ ಮತ್ತು ಅವರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ಸಮರ್ಥಿಸಿಕೊಂಡಿದೆ.
ಹರ್ಯಾಣ ವಿಧಾನಸಭಾ ಚುನಾವಣೆಗೆ ಕುರಿತ ದಾಖಲೆಪತ್ರಗಳನ್ನು ವಕೀಲ ಮೆಹಮೂದ್ ಪ್ರಚಾ ಅವರಿಗೆ ನೀಡುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಬದಲಾವಣೆಗಳನ್ನು ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಚುನಾವಣೆಗೆ ಸಂಬಂಧಿಸಿದ ವಿಡಿಯೊ ಚಿತ್ರೀಕರಣ, ಸಿಸಿಟಿವಿ ದೃಶ್ಯಾವಳಿ ಮತ್ತು ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ಫಾರ್ಮ್ ನಂ. 17-ಸಿ ಯ 1 ಮತ್ತು 2ನೇ ಭಾಗವನ್ನು ಒದಗಿಸುವಂತೆ ಅವರು ಅರ್ಜಿ ಸಲ್ಲಿಸಿದ್ದರು.
ಚುನಾವಣಾ ಆಯೋಗದ ದಿಢೀರ್ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಹೇಳಿದ್ದಾರೆ.