ಬಜೆಟ್ನಲ್ಲಿ ದೇಶದ ಪ್ರತಿಯೊಂದು ರಾಜ್ಯವನ್ನು ಉಲ್ಲೇಖಿಸಲು ಸಾಧ್ಯವಿಲ್ಲ: ತಾರತಮ್ಯಕಾರಿ ಬಜೆಟ್ ಎಂಬ ಟೀಕೆಗೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ
ನಿರ್ಮಲಾ ಸೀತಾರಾಮನ್ | PC : PTI
ಹೊಸದಿಲ್ಲಿ: ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್ 2024ರಲ್ಲಿ ಇತರ ರಾಜ್ಯಗಳಿಗಿಂತ ಹೆಚ್ಚಾಗಿ ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಆದ್ಯತೆ ನೀಡಲಾಗಿದೆ ಎಂಬ ವಿಪಕ್ಷಗಳ ಆರೋಪವನ್ನು “ಅತಿರೇಕದ ಆರೋಪ” ಎಂದು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ.
“ಪ್ರತಿಯೊಂದು ಬಜೆಟ್ನಲ್ಲಿ ದೇಶದ ಪ್ರತಿಯೊಂದು ರಾಜ್ಯವನ್ನು ಉಲ್ಲೇಖಿಸುವ ಅವಕಾಶ ದೊರಕುವುದಿಲ್ಲ. ವದವನ್ನಲ್ಲಿ ಬಂದರು ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಬಜೆಟ್ನಲ್ಲಿ ಮಹಾರಾಷ್ಟ್ರದ ಹೆಸರು ಉಲ್ಲೇಖವಾಗಿಲ್ಲ. ಇದರರ್ಥ ಮಹಾರಾಷ್ಟ್ರವನ್ನು ನಿರ್ಲಕ್ಷಿಸಲಾಗಿದೆಯೇ? ಒಂದು ನಿರ್ದಿಷ್ಟ ರಾಜ್ಯದ ಹೆಸರನ್ನು ಉಲ್ಲೇಖಿಸಿಲ್ಲ ಎಂದರೆ ಸರ್ಕಾರದ ಯೋಜನೆಗಳು ಆ ರಾಜ್ಯಕ್ಕೆ ತಲುಪುವುದಿಲ್ಲ ಎಂದರ್ಥವೇ?” ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
“ತಮ್ಮ ರಾಜ್ಯಗಳಿಗೆ ಬಜೆಟ್ನಲ್ಲಿ ಏನನ್ನೂ ನೀಡಲಾಗಿಲ್ಲ ಎಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಮೂಡಿಸುವ ಉದ್ದೇಶಪೂರ್ವಕ ಯತ್ನವನ್ನು ವಿಪಕ್ಷಗಳು ಮಾಡುತ್ತಿವೆ. ಇದು ಅತಿರೇಕದ ಆರೋಪ,” ಎಂದು ಕೇಂದ್ರ ಬಜೆಟ್ ತಾರತಮ್ಯಕಾರಿಯಾಗಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ರಾಜ್ಯಸಭೆಯಲ್ಲಿ ಉತ್ತರಿಸುವ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದರು.
“ಕುರ್ಚಿ ಉಳಿಸಿಕೊಳ್ಳಲು ಇದೆಲ್ಲ ಮಾಡಲಾಗಿದೆ, ಸಮತೋಲನವಿಲ್ಲದೇ ಇದ್ದರೆ ಅಭಿವೃದ್ಧಿ ಹೇಗೆ ಸಾಧ್ಯ?” ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ ನಂತರ ವಿಪಕ್ಷಗಳು ಸದನದಿಂದ ಹೊರನಡೆದಿವೆ.