ಹೊರೆ ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಸರಣಿ ಸಾವು ಪ್ರಕರಣ
ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆ (PTI)
ಮುಂಬೈ: ನಾಂದೇಡ್ ಹಾಗೂ ಛತ್ರಪತಿ ಸಂಭಾಜಿನಗರ(ಈ ಹಿಂದಿನ ಔರಂಗಾಬಾದ್)ದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದಿರುವ ಹಲವಾರು ರೋಗಿಗಳ ಸರಣಿ ಸಾವು ಪ್ರಕರಣದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಶುಕ್ರವಾರ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಚಾಟಿ ಬೀಸಿದೆ ಎಂದು indiatoday.in ವರದಿ ಮಾಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಡಿ.ಕೆ.ಉಪಾಧ್ಯಾಯ, “ಸರ್ಕಾರಿ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಹೊರೆಯಾಗುತ್ತಿದೆ ಎಂದು ನೀವು ನುಣುಚಿಕೊಳ್ಳಲು ಸಾಧ್ಯವಿಲ್ಲ. ನೀವೇ ಸರ್ಕಾರ ನಡೆಸುವವರು. ನೀವು ಜವಾಬ್ದಾರಿಯನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸಲು ಸಾಧ್ಯವಿಲ್ಲ” ಎಂದು ಕಿಡಿ ಕಾರಿದರು.
“ಅದನ್ನು ಹೇಗೆ ಬಲಿಷ್ಠಗೊಳಿಸುವುದು? ಎಲ್ಲವೂ ದಾಖಲೆಯಲ್ಲಿದೆ. ಆದರೆ, ಆ ಯೋಜನೆಗಳು ಕಾರ್ಯಗತಗೊಳ್ಳದಿದ್ದರೆ ಯಾವುದೇ ಅರ್ಥವಿಲ್ಲ” ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದಿರುವ ಸಾವಿನ ಪ್ರಕರಣದಲ್ಲಿ ಗಂಭೀರ ನಿರ್ಲಕ್ಷ್ಯ ಕಂಡು ಬಂದಿಲ್ಲ ಎಂಬ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಅವರ ಹೇಳಿಕೆಗೆ ಬಾಂಬೆ ಹೈಕೋರ್ಟ್ ಮೇಲಿನಂತೆ ಪ್ರತಿಕ್ರಿಯಿಸಿತು.
“ಆಸ್ಪತ್ರೆಗಳಿಂದ ಗಂಭೀರ ನಿರ್ಲಕ್ಷ್ಯವಾಗಿದೆ ಎಂಬಂತೆ ಕಂಡು ಬರುತ್ತಿಲ್ಲ. ಆದರೆ, ಏನಾಗಿದೆಯೋ ಅದು ದುಃಖಕರ ವಿಚಾರ. ಜನರು ಮೃತಪಟ್ಟಿದ್ದಾರೆ” ಎಂದು ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಹೈಕೋರ್ಟ್ ಗೆ ತಿಳಿಸಿದರು.
ಮಹಾರಾಷ್ಟ್ರ ಆಸ್ಪತ್ರೆಗಳಲ್ಲಿನ ಸರಣಿ ಸಾವಿನ ಪ್ರಕರಣಗಳನ್ನು ಬಾಂಬೆ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಹಾಸಿಗೆಗಳು, ಸಿಬ್ಬಂದಿಗಳು ಹಾಗೂ ಅತ್ಯಗತ್ಯ ಔಷಧಗಳ ಕೊರತೆ ಕಾರಣ ಎಂಬ ವೈದ್ಯರ ಹೇಳಿಕೆಯನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇದರೊಂದಿಗೆ, ಘಟನೆಯ ಕುರಿತು ವಿವರಗಳನ್ನು ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಹಾಗೂ ನ್ಯಾ. ಆರಿಫ್ ಡಾಕ್ಟರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಆರೋಗ್ಯ ಇಲಾಖೆಗೆ ರಾಜ್ಯ ಸರ್ಕಾರವು ಎಷ್ಟು ಬಜೆಟ್ ನಿಗದಿಗೊಳಿಸುತ್ತಿದೆ ಎಂಬ ವಿವರಗಳನ್ನು ಸಲ್ಲಿಸುವಂತೆ ಶುಕ್ರವಾರ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಅಡ್ವೊಕೇಟ್ ಜನರಲ್ ಬಿರೇಂದ್ರ ಸರಾಫ್ ಅವರಿಗೆ ಸೂಚಿಸಿತು.
ಇದಕ್ಕೂ ಮುನ್ನ, ತಮ್ಮ ತಮ್ಮ ಜಿಲ್ಲೆಗಳಲ್ಲಿನ ಎಲ್ಲ ವೈದ್ಯಕೀಯ ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳು, ಸ್ಥಳೀಯ ಸಂಸ್ಥೆಗಳಡಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಹಾಲಿ ಸೌಲಭ್ಯಗಳ ಸ್ಥಿತಿಯ ಕುರಿತು ವರದಿ ನೀಡುವಂತೆ ಗುರುವಾರ ಮುಖ್ಯಮಂತ್ರಿ ಏಕನಾಥ್ ಶಿಂದೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು