ನಮ್ಮನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ: ದಿಲ್ಲಿ ಸರಕಾರದ ವಿರುದ್ಧ ಕಿಡಿಕಾರಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಪ್ರತಿವರ್ಷ ರಾಷ್ಟ್ರ ರಾಜಧಾನಿಯನ್ನು ಕಾಡುತ್ತಿರುವ ವಾಯುಮಾಲಿನ್ಯದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ಮ್ಯಾರಥಾನ್ ವಿಚಾರಣೆಯನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ದಿಲ್ಲಿ ಮತ್ತು ಪಂಜಾಬ್ ಸರಕಾರಗಳನ್ನು ತೀವ್ರ ತರಾಟೆಗೆತ್ತಿಕೊಂಡಿತು. ದಿಲ್ಲಿಯಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಹದಗೆಡುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವ ಕೃಷಿ ತ್ಯಾಜ್ಯ ಸುಡುವಿಕೆಯ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಸ್.ಧುಲಿಯಾ ಅವರ ಪೀಠವು ದಿಲ್ಲಿ ಮತ್ತು ಪಂಜಾಬಗಳಿಗೆ ಸೂಚಿಸಿತು. ಉಭಯ ರಾಜ್ಯಗಳನ್ನು ಆಪ್ ಆಳುತ್ತಿದೆ.
‘ಇದು ಕಳೆದ ಆರು ವರ್ಷಗಳಲ್ಲಿಯೇ ಅತ್ಯಂತ ಕಲುಷಿತ ನವಂಬರ್ ತಿಂಗಳು ಆಗಿದೆ. ಸಮಸ್ಯೆ ತಿಳಿದಿರುವುದೇ ಆಗಿದೆ ಮತ್ತು ಅದನ್ನು ನಿಯಂತ್ರಿಸುವುದು ನಿಮ್ಮ ಕೆಲಸವಾಗಿದೆ’ಎಂದು ಪೀಠವು ಉಭಯ ರಾಜ್ಯಗಳಿಗೆ ಮತ್ತು ನೆರೆಯ ಬಿಜೆಪಿ ಆಡಳಿತದ ಉತ್ತರ ಪ್ರದೇಶಕ್ಕೆ ತಿಳಿಸಿತು.
ದಿಲ್ಲಿ-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್)ಗೆ ಹಣಕಾಸು ಒದಗಿಸುವಲ್ಲಿ ವಿಳಂಬಕ್ಕಾಗಿ ದಿಲ್ಲಿ ಸರಕಾರಕ್ಕೆ ಛೀಮಾರಿಯನ್ನೂ ಹಾಕಿದ ನ್ಯಾಯಾಲಯವು,ಜಾಹೀರಾತುಗಳಿಗಾಗಿ ಆಪ್ ವೆಚ್ಚದಿಂದ ಹಣವನ್ನು ವರ್ಗಾಯಿಸುವಂತೆ ಆದೇಶಿಸಿತು.
‘ನೀವು ನಮ್ಮ ಆದೇಶವನ್ನು ಪಾಲಿಸಿಲ್ಲ. ನಮಗೆ ಬೇರೆ ಮಾರ್ಗ ಉಳಿದಿಲ್ಲ. ನೀವು ನಮ್ಮನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ಕಟುವಾಗಿ ಹೇಳಿತು.
ಕಳೆದ ಜುಲೈನಲ್ಲಿ, ನಗರವನ್ನು ನೆರೆಯ ರಾಜ್ಯಗಳಿಗೆ ಸಂಪರ್ಕಿಸುವ ಮತ್ತು ವಾಹನ ಸಂಚಾರವನ್ನು ತಗ್ಗಿಸುತ್ತದೆ ಎಂದು ನಿರೀಕ್ಷಿಸಲಾಗಿರುವ ರೈಲು ಜಾಲಕ್ಕೆ ಕೊಡುಗೆ ನೀಡಲು ತನಗೆ ಸಾಧ್ಯವಿಲ್ಲ ಎಂದು ದಿಲ್ಲಿ ಸರಕಾರವು ತಿಳಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಅದಕ್ಕೆ ಛೀಮಾರಿ ಹಾಕಿತ್ತು.
ರೈಲು ಜಾಲ ನಿರ್ಮಾಣಕ್ಕೆ 415 ಕೋಟಿ ರೂ.ಗಳ ಪಾಲನ್ನು ನೀಡಲು ತನ್ನ ಅಸಾಮರ್ಥ್ಯವನ್ನು ದಿಲ್ಲಿ ಸರಕಾರವು ವ್ಯಕ್ತಪಡಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು,ಕಳೆದ ಮೂರು ವರ್ಷಗಳಲ್ಲಿ ಜಾಹೀರಾತಿಗಾಗಿ ವ್ಯಯಿಸಿರುವ ಮೊತ್ತದ ವಿವರಗಳನ್ನು ತನ್ನ ಮುಂದಿರಿಸುವಂತೆ ಅದಕ್ಕೆ ನಿರ್ದೇಶನ ನೀಡಿತ್ತು.
ದಿಲ್ಲಿ ಸರಕಾರವು ಒಂದು ವಾರದೊಳಗೆ ಆರ್‌ಆರ್‌ಟಿಎಸ್‌ಗೆ ಹಣವನ್ನು ನೀಡದಿದ್ದರೆ ಅದರ ‘ಜಾಹೀರಾತು’ ಹಂಚಿಕೆಗಳಿಂದ ಹಣವನ್ನು ವರ್ಗಾಯಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯವು ಆಡಳಿತಾರೂಢ ಆಪ್‌ಗೆ ಎಚ್ಚರಿಕೆಯನ್ನು ನೀಡಿತು.
ಕೃಷಿ ತ್ಯಾಜ್ಯಗಳನ್ನು ಸುಡುತ್ತಿರುವುದಕ್ಕಾಗಿ ಮತ್ತೆ ತೀವ್ರ ನಿಗಾದಲ್ಲಿರುವ ಪಂಜಾಬಿನ ರೈತರ ಸ್ಥಿತಿಯ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,ರೈತನನ್ನು ಖಳನಾಯಕನನ್ನಾಗಿ ಮಾಡಲಾಗುತ್ತಿದೆ ಮತ್ತು ಅವನ ಮಾತನ್ನು ಯಾರೂ ಕೇಳುತ್ತಿಲ್ಲ. ಕೃಷಿ ತ್ಯಾಜ್ಯವನ್ನು ಸುಡಲು ಏನಾದರೂ ಕಾರಣವಿರಲೇಬೇಕು ಎಂದು ಹೇಳಿತು.