ಏಪ್ರಿಲ್ ನಿಂದ ಕಾರು ದುಬಾರಿ; ಬೆಲೆ ಏರಿಕೆ ಪ್ರಕಟಿಸಿದ ಪ್ರಮುಖ ಕಂಪನಿಗಳು

ಸಾಂದರ್ಭಿಕ ಚಿತ್ರ PC: freepik
ಹೊಸದಿಲ್ಲಿ: ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿಗಳಾದ ಟಾಟಾ ಮೋಟರ್ಸ್, ಕಿಯಾ ಇಂಡಿಯಾ ಮತ್ತು ಮಾರುತಿ ಸುಜುಕಿ ಮುಂದಿನ ತಿಂಗಳಿನಿಂದ ಜಾರಿಯಾಗುವಂತೆ ಬೆಲೆ ಏರಿಕೆಯನ್ನು ಘೋಷಿಸಿವೆ. ಈ ವರ್ಷದ ಜನವರಿಯಲ್ಲಿ ಬೆಲೆ ಏರಿಕೆ ಮಾಡಿದ ಕೆಲವೇ ತಿಂಗಳಲ್ಲಿ ಈ ಘೋಷಣೆ ಹೊರಬಿದ್ದಿದೆ. ಸರಕುಗಳ ಬೆಲೆ ಏರಿಕೆ, ಪೂರೈಕೆ ಸರಣಿಯ ವೆಚ್ಚ ಹೆಚ್ಚಳ ಮತ್ತು ಹಣದುಬ್ಬರದ ಒತ್ತಡ ಕಾರಣದಿಂದ ಬೆಲೆ ಏರಿಕೆ ಅನಿವಾರ್ಯ ಎಂದು ಕಂಪನಿಗಳು ಪ್ರತಿಪಾದಿಸಿವೆ.
ಪ್ರಯಾಣಿಕ ವಾಹನಗಳ ಮಾರಾಟ ಕುಸಿತದ ನಡುವೆಯೇ ಇದೀಗ ಬೆಲೆ ಏರಿಕೆ ನಿರ್ಧಾರ ಪ್ರಕಟವಾಗಿದೆ. ಕಾರು ಉತ್ಪಾದಕರು ಮತ್ತು ಡೀಲರ್ ಶೋರೂಂಗಳು ಕಡಿಮೆ ಬೇಡಿಕೆಯ ಮಾಡೆಲ್ ಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದ್ದು, ಎಫ್ಎಡಿಎ ಅಂಕಿ ಅಂಶಗಳ ಪ್ರಕಾರ, ಚಿಲ್ಲರೆ ಪ್ರಯಾಣಿಕ ವಾಹನಗಳ ಮಾರಾಟ 2025ರ ಫೆಬ್ರವರಿಯಲ್ಲಿ 3.03 ಲಕ್ಷಕ್ಕೆ ಇಳಿದಿದ್ದು, ಶೇಕಡ 10.34ರಷ್ಟು ಕುಸಿತ ದಾಖಲಿಸಿದೆ.
ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಎಲ್ಲ ಪ್ರಯಾಣಿಕ ವಾಹನಗಳ ಬೆಲೆಯನ್ನು ಏಪ್ರಿಲ್ ನಿಂದ ಏರಿಸುವುದಾಗಿ ಟಾಟಾ ಮೋಟರ್ಸ್ ಮಂಗಳವಾರ ಪ್ರಕಟಿಸಿದೆ. ಜನವರಿಯಲ್ಲಿ ಪ್ರಯಾಣಿಕ ವಾಹನಗಳ ಬೆಲೆಯನ್ನು ಕಂಪನಿ ಶೇಕಡ 3ರಷ್ಟು ಹೆಚ್ಚಿತ್ತು. ಇದರ ಜತೆಗೆ ವಾಣಿಜ್ಯ ವಾಹನಗಳ ಬೆಲೆಯನ್ನೂ ಶೇಕಡ 2ರಷ್ಟು ಹೆಚ್ಚಿಸಲಾಗಿದ್ದು, ಮುಂದಿನ ತಿಂಗಳಿನಿಂದ ಇದು ಜಾರಿಗೆ ಬರಲಿದೆ. ಟಾಟಾ ಮೋಟರ್ಸ್ 5 ಲಕ್ಷದಿಂದ ಆರಂಭವಾಗಿ 25.09 ಲಕ್ಷವರೆಗಿನ ಕಾರುಗಳ ಶ್ರೇಣಿಯನ್ನು ಹೊಂದಿದೆ.
ಕಿಯಾ ಇಂಡಿಯಾ ಕೂಡಾ ಶೇಕಡ 3ರಷ್ಟು ಬೆಲೆ ಏರಿಕೆಯನ್ನು ಘೋಷಿಸಿದೆ. ಜನವರಿಯಲ್ಲಿ ಶೇಕಡ 3ರಷ್ಟು ಬೆಲೆ ಏರಿಕೆ ಮಾಡಿದ ಬಳಿಕ ಇದು ಎರಡನೇ ಏರಿಕೆಯಾಗಿದೆ. ಭಾರತದ ಅತಿದೊಡ್ಡ ಕಾರು ಉತ್ಪಾದಕ ಕಂಪನಿಯಾದ ಮಾರುತಿ ಸುಜುಕಿ ಶೇಕಡ 4ರಷ್ಟು ಬೆಲೆ ಏರಿಕೆ ಘೋಷಿಸಿದ್ದು, 2025ರಲ್ಲಿ ಮೂರನೇ ಬಾರಿಗೆ ಬೆಲೆ ಏರಿಕೆ ಮಾಡಲಿದೆ. ಕಳೆದ ಜನವರಿ ಹಾಗೂ ಫೆಬ್ರುವರಿಯಲ್ಲಿ ಎರಡು ಹಂತಗಳಲ್ಲಿ ಬೆಲೆ ಹೆಚ್ಚಿಸಲಾಗಿತ್ತು.