ಉತ್ತರಪ್ರದೇಶ | ಬಿಷ್ಣೋಯಿ ಗ್ಯಾಂಗ್ ನಿಂದ 10 ಕೋಟಿ ರೂ. ನೀಡುವಂತೆ ವ್ಯಕ್ತಿಗೆ ಬೆದರಿಕೆ : ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ | PC : iStock Photo
ಬಲ್ಲಿಯ : ಬಿಷ್ಣೋಯಿ ಗ್ಯಾಂಗ್ ನ ಸದಸ್ಯನೊಬ್ಬ 10 ಕೋಟಿ ರೂ. ನೀಡುವಂತೆ ತನಗೆ ಬೆದರಿಕೆ ಒಡ್ಡಿದ್ದಾನೆ ಎಂದು ಉತ್ತರ ಪ್ರದೇಶದ ನಗರ ಪಂಚಾಯತಿಯ ಮಾಜಿ ಅಧ್ಯಕ್ಷರೊಬ್ಬರು ನೀಡಿರುವ ದೂರನ್ನು ಆಧರಿಸಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಲ್ತಾರಾ ರಸ್ತೆ ನಗರ ಪಂಚಾಯತಿಯ ಮಾಜಿ ಅಧ್ಯಕ್ಷರಾದ ದಿನೇಶ್ ಕುಮಾರ್ ಗುಪ್ತ ಪತ್ರವೊಂದರ ಮೂಲಕ ಬೆದರಿಕೆ ಸ್ವೀಕರಿಸಿದ್ದು, ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಉಭಾಂವ್ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಪಿನ್ ಸಿಂಗ್ ಹೇಳಿದ್ದಾರೆ.
ಅವರ ದೂರನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351(4) ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಅವರು ತಿಳಿಸಿದ್ದಾರೆ.
ಈ ಸಂಬಂಧ ಶನಿವಾರ ಪೊಲೀಸರು ದೂರು ಸ್ವೀಕರಿಸಿದ್ದು, ಕಾನೂನು ಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಸ್ರ ಪ್ರದೇಶ ವೃತ್ತಾಧಿಕಾರಿ ಮುಹಮ್ಮದ್ ಫಹೀಂ ಖುರೇಶಿ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಅಂಚೆಯ ಮೂಲಕ ನಾನು ಪತ್ರವೊಂದನ್ನು ಸ್ವೀಕರಿಸಿದ್ದು, ಬಿಷ್ಣೋಯಿ ಗ್ಯಾಂಗ್ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ, 10 ಕೋಟಿ ರೂ. ನೀಡುವಂತೆ ನನಗೆ ಬೆದರಿಕೆ ಒಡ್ಡಿದ್ದಾನೆ ಎಂದು ಶನಿವಾರ ಸಂಜೆ ದೂರುದಾರ ದಿನೇಶ್ ಕುಮಾರ್ ಗುಪ್ತ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದಿನೇಶ್ ಕುಮಾರ್ ಗುಪ್ತ ಉದ್ಯಮಿಯಾಗಿದ್ದು, ಅವರ ಪತ್ನಿ ರೇಣು ಗುಪ್ತ, ಬೆಲ್ತಾರಾ ರಸ್ತೆ ನಗರ ಪಂಚಾಯತಿಯ ಹಾಲಿ ಅಧ್ಯಕ್ಷೆಯಾಗಿದ್ದಾರೆ.