ಸಂದೇಶಖಾಲಿ ಪ್ರಕರಣ | ಎನ್ ಸಿ ಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ ವಿರುದ್ಧ ಇ.ಸಿ.ಗೆ ದೂರು: ಟಿಎಂಸಿ
ರೇಖಾ ಶರ್ಮಾ | PC : PTI
ಕೋಲ್ಕತಾ: ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಆರೋಪದ ಕುರಿತಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಔಪಚಾರಿಕ ದೂರು ಸಲ್ಲಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಶುಕ್ರವಾರ ಹೇಳಿದೆ.
ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರ ಹಾಗೂ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಷ್ಟ್ರೀಯ ಮಹಿಳಾ ಆಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಫಾರಸು ಮಾಡಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ರೇಖಾ ಶರ್ಮಾ ಅವರ ವಿರುದ್ಧ ತೃಣಮೂಲ ಕಾಂಗ್ರೆಸ್, ಚುನಾವಣಾ ಆಯೋಗವನ್ನು ಸಂಪರ್ಕಿಸಲಿದೆ ಎಂದು ಪಶ್ಚಿಮ ಬಂಗಾಳದ ಸಚಿವರಾದ ಹಾಗೂ ಟಿಎಂಸಿ ವಕ್ತಾರರಾದ ಶಶಿ ಪಂಜಾ ಅವರು ತಿಳಿಸಿದ್ದಾರೆ.
ಈ ಆರೋಪದ ಕುರಿತಂತೆ ಚುನಾವಣಾ ಆಯೋಗವನ್ನು ಸಂಪರ್ಕಿಸುವ ಮುನ್ನ ತೃಣಮೂಲ ಕಾಂಗ್ರೆಸ್ ಈಗಾಗಲೇ ಬಿಜೆಪಿ ಹಾಗೂ ಪಶ್ಚಿಮ ಬಂಗಾಳ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ವಿರುದ್ಧ ದೂರು ದಾಖಲಿಸಿದೆ ಎಂದು ಪಂಜಾ ತಿಳಿಸಿದ್ದಾರೆ.