ಮೀಸಲಾತಿ ಕುರಿತು ಅಮಿತ್ ಶಾ ಹೇಳಿಕೆಯ ತಿರುಚಿದ ವೀಡಿಯೋ ವೈರಲ್
ಗೃಹ ಸಚಿವಾಲಯದ ದೂರಿನ ನಂತರ ಎಫ್ಐಆರ್ ದಾಖಲಿಸಿದ ದಿಲ್ಲಿ ಪೊಲೀಸರು
ಕೇಂದ್ರ ಗೃಹ ಸಚಿವ ಅಮಿತ್ ಶಾ (PTI)
ಹೊಸದಿಲ್ಲಿ: ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ರದ್ದುಗೊಳಿಸಬೇಕೆಂಬ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಕ್ತಪಡಿಸುತ್ತಿರುವಂತೆ ತೋರಿಸಲಾಗಿರುವ ತಿರುಚಲ್ಪಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ದೂರಿನ ಆಧಾರದಲ್ಲಿ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಚುನಾವಣಾ ರ್ಯಾಲಿಯಲ್ಲಿ ಶಾ ಅವರು ನೀಡಿದ್ದ ಹೇಳಿಕೆಗಳನ್ನು ತಿರುಚಿ ಈ ವೀಡಿಯೋ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
“ಕಾಂಗ್ರೆಸ್ ಒಂದು ತಿರುಚಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವಂತೆ ಮಾಡಿದೆ, ಇದು ಸಂಪೂರ್ಣ ಸುಳ್ಳು ಮತ್ತು ವ್ಯಾಪಕ ಹಿಂಸಾಚಾರ ಉಂಟು ಮಾಡುವ ಸಾಧ್ಯತೆಯನ್ನು ಹೊಂದಿದೆ. ಎಸ್ಸಿ/ಎಸ್ಟಿ ಹಾಗೂ ಒಬಿಸಿಗಳ ಪಾಲನ್ನು ಕಡಿಮೆಗೊಳಿಸಿ ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಅಸಂವಿಧಾನಿಕ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಅಮಿತ್ ಶಾ ಮಾತನಾಡಿದ್ದರು. ನಕಲಿ ವೀಡಿಯೋವನ್ನು ಹಲವು ಕಾಂಗ್ರೆಸ್ ವಕ್ತಾರರು ಪೋಸ್ಟ್ ಮಾಡಿದ್ದಾರೆ. ಅವರು ಕಾನೂನು ಕ್ರಮಕ್ಕೆ ಸಿದ್ಧರಾಗಬೇಕು,” ಎಂದು ಮಾಲವಿಯಾ ಹೇಳಿದ್ದಾರೆ.
ಈ ವೀಡಿಯೋ ಪೋಸ್ಟ್ ಮಾಡಿದ್ದ ಹಲವರು ಇದು ಪರಿಶಿಷ್ಟ ಜಾತಿ, ವರ್ಗಗಳ ಮೀಸಲಾತಿ ರದ್ದುಗೊಳಿಸುವ ಬಿಜೆಪಿ ಅಜೆಂಡಾವನ್ನು ಸೂಚಿಸುತ್ತಿದೆ ಎಂದಿದ್ದರು.
ದಿಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.