ದ್ವೇಷಕಾರಕ ಹೇಳಿಕೆ ಆರೋಪ: ಸಿಪಿಎಂ ಮುಖಂಡನ ವಿರುದ್ಧ ಪ್ರಕರಣ ದಾಖಲು

ಎಂ.ಜೆ.ಫ್ರಾನ್ಸಿಸ್ PC:x.com/BreakingKerala
ಮೂವಾಟ್ಟುಪುಝ (ಕೇರಳ): ಮುಸ್ಲಿಮರ ಬಗ್ಗೆ ದ್ವೇಷ ಮೂಡಲು ಕಾರಣವಾಗುವ ಹೇಳಿಕೆ ನೀಡಿದ ಆರೋಪದಲ್ಲಿ ಸ್ಥಳೀಯ ಸಿಪಿಎಂ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೂವಾಟ್ಟುಪುಝ ಕ್ಷೇತ್ರ ಸಮಿತಿ ಸದಸ್ಯ ಎಂ.ಜೆ.ಫ್ರಾನ್ಸಿಸ್ ವಿರುದ್ಧ ಸೊಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಮುಸ್ಲಿಂ ಜನರು ಅಪರಾಧ ಸ್ವಭಾವ ಹೊಂದಿರುವ ಅತ್ಯಂತ ಕೆಟ್ಟ ಮಂದಿ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಫ್ರಾನ್ಸಿಸ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟ್ ನ ಸ್ಕ್ರೀನ್ ಶಾಟ್ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಕ್ಷ ಈ ಬಗ್ಗೆ ಅಂತರ ಕಾಯ್ದುಕೊಂಡಿತ್ತು. ಫ್ರಾನ್ಸಿಸ್ ಹೇಳಿಕೆ ಪಕ್ಷದ ನಿಲುವು ಅಲ್ಲ ಎಂದು ಕ್ಷೇತ್ರ ಸಮಿತಿ ಪ್ರಕಟಣೆ ನೀಡಿ ಸ್ಪಷ್ಟಪಡಿಸಿತ್ತು.
ಆ ಬಳಿಕ ಫ್ರಾನ್ಸಿಸ್ ಕ್ಷಮೆಯಾಚನೆ ಮಾಡಿದ್ದರು. ಇಡೀ ಮುಸ್ಲಿಂ ಸಮುದಾಯವನ್ನು ಅಪರಾಧಿಗಳು ಎಂದು ಬಿಂಬಿಸಿರುವುದು ತಮ್ಮಿಂದ ಆದ ಪ್ರಮಾದ ಎಂದು ಅವರು ಹೇಳಿದ್ದರು. ಮಾಜಿ ಸಚಿವ ಮತ್ತು ಎಡಪಕ್ಷಗಳ ಬೆಂಬಲಿತ ಪಕ್ಷೇತರ ಶಾಸಕ ಕೆ.ಟಿ.ಜಲೀಲ್ ಅವರು ಅಪರಾಧಿಗಳಲ್ಲಿ ದೊಡ್ಡ ಪಾಲು ಮುಸ್ಲಿಮರು ಎಂದು ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಶಿವಶಂಕರನ್ ಎಂಬ ವ್ಯಕ್ತಿ ಮಾಡಿದ ಪೋಸ್ಟ್ ನ ಕೆಳಗೆ ಫ್ರಾನ್ಸಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ತಮ್ಮ ಹೇಳಿಕೆಯಿಂದ ಮಾನಸಿಕವಾಗಿ ನೋವಾಗಿರುವ ಎಲ್ಲರಲ್ಲೂ ಕ್ಷಮೆ ಯಾಚಿಸುವುದಾಗಿ ಫ್ರಾನ್ಸಿಸ್ ಹೇಳಿದ್ದರು. ತಾವು ಯಾವುದೇ ಧರ್ಮದ ಅನುಯಾಯಿ ಅಲ್ಲ; ಯಾವುದೇ ನಿರ್ದಿಷ್ಟ ಧರ್ಮದ ಬಗ್ಗೆ ಒಲವು ಅಥವಾ ದ್ವೇಷ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.