ಬಿಜೆಪಿ ಅವಧಿಯಲ್ಲಿ ʼಕರ್ನಾಟಕ ನೀರಾವರಿ ನಿಗಮದʼ 300 ಕೋಟಿ ರೂ. ಮಠಗಳು, ಸಮುದಾಯ ಭವನಗಳಿಗೆ ಬಳಕೆ: ವರದಿ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ನೀರಾವರಿ ಕಾಮಗಾರಿಗೆಂದು ಸ್ಥಾಪಿಸಲಾಗಿರುವ ʼಕರ್ನಾಟಕ ನೀರವಾರಿ ನಿಗಮ ಲಿಮಿಟೆಡ್ʼ ನಲ್ಲಿನ ಅನುದಾನವನ್ನು ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ, ಶಾಸಕರು ಪ್ರಾಬಲ್ಯ ಬಳಸಿಕೊಂಡು ನಿರಾವರಿಯೇತರ ಕಾಮಗಾರಿಗೆ ಬಳಸಿರುವ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಶಾಸಕರು ಮತ್ತು ಸಂಸದರ ಮನವಿ ಆಧರಿಸಿ 2020ರಿಂದ 2023ರ ಅವಧಿಯಲ್ಲಿ ಸಮುದಾಯ ಭವನಗಳು, ಮಠಗಳು ಮತ್ತು ಬೆರಳೆಣಿಕೆಯಷ್ಟು ಶಾದಿ ಮಹಲ್ಗಳನ್ನು ನಿರ್ಮಿಸಲು ʼಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ʼ ನ ನೂರಾರು ಕೋಟಿ ರೂ. ಬಳಕೆ ಮಾಡಲಾಗಿದೆ.
ಕಳೆದ ಒಂದು ವರ್ಷದಲ್ಲಿ ಕರ್ನಾಟಕ ನೀರಾವರಿ ನಿಗಮ ಅಥವಾ ಕೆಎನ್ಎನ್ಎಲ್ ನಷ್ಟದಲ್ಲಿದ್ದು, ನಿಗಮದಲ್ಲಿನ ಹಣಕಾಸಿನ ಕೊರತೆಯು ಕಾಲುವೆಗಳ ದುರಸ್ತಿಯಂತಹ ನಿರ್ಣಾಯಕ ಕೆಲಸಗಳ ಮೇಲೆ ಪರಿಣಾಮ ಬೀರಿದೆ.
ನಾವು 6,000 ಕೋಟಿ ರೂ.ನಷ್ಟು ಪಾವತಿ ಬಾಕಿ ಹೊಂದಿದ್ದೇವೆ, 2 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಲವು ತಿಂಗಳು ಕಾದ ಬಳಿಕ 8 ಲಕ್ಷ ರೂ. ನೀಡಲಾಗಿದೆ. ಶಿವಮೊಗ್ಗ ಒಂದರಲ್ಲೇ ಬಾಕಿ ಉಳಿದಿರುವ ಹಲವು ಯೋಜನೆಗಳಿಗೆ ಸುಮಾರು 2 ಸಾವಿರ ಕೋಟಿ ರೂ.ಗಳ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.
ಶಿಕಾರಿಪುರ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಅವರ ಪುತ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ಮತ್ತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಮನವಿ ಮೇರೆಗೆ ನಿಗಮದ ಹಣದಿಂದ ನೀರಾವರಿಯೇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ದಾಖಲೆಗಳು ತೋರಿಸಿದೆ. KNNL ಮಂಡಳಿಯು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿದೆ. ತುಂಗಾ ಮೇಲ್ದಂಡೆ ಯೋಜನೆಯ ಜಲಾನಯನ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನೆಪದಲ್ಲಿ ಮಂಡಳಿಯ 300 ಕೋಟಿ ರೂ. ಹಣವನ್ನು ಸಮುದಾಯ ಭವನ ಹಾಗೂ ಮಠಗಳ ನವೀಕರಣಕ್ಕೆ ವ್ಯಯಿಸಲಾಗಿದೆ ಎನ್ನಲಾಗಿದೆ.
KNNL ಮಂಡಳಿಯಡಿಯಲ್ಲಿ ಕೈಗೊಂಡ 300ಕ್ಕೂ ಹೆಚ್ಚು ಕೆಲಸಗಳ ದಾಖಲೆಗಳನ್ನು ಪರಿಶೀಲಿಸಿದಾಗ 90% ಸಮುದಾಯ ಭವನಗಳ(ಧಾರ್ಮಿಕ ಸಭಾಂಗಣ) ನಿರ್ಮಾಣಕ್ಕೆ ವೆಚ್ಚ ಮಾಡಿರುವುದು ಕಂಡು ಬಂದಿದೆ. ಬಸವತತ್ವ ಮಂದಿರ, ರಾಘವೇಂದ್ರ ಸ್ವಾಮಿ ದೇವಸ್ಥಾನ, ಸದ್ಗುರು ಸೇವಾ ಟ್ರಸ್ಟ್, ಬಸವೇಶ್ವರ ದೇವಸ್ಥಾನ, ಕಾಲಭೈರವೇಶ್ವರ ದೇವಸ್ಥಾನ, ನಂದಿಗುಡಿ ಬೃಹನ್ಮಠ, ತರಳಬಾಳು ಮಠಗಳಿಗೆ ಅನುದಾನ ನೀಡಿರುವುದು ಕಂಡು ಬಂದಿದೆ.
ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಬೆರಳೆಣಿಕೆಯಷ್ಟು ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳನ್ನು ಶಿವಮೊಗ್ಗದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಬ್ರಾಹ್ಮಣರು, ಬಿಲ್ಲವರು, ವಿಶ್ವಕರ್ಮ, ವಾಲ್ಮೀಕಿ ಮತ್ತು ಇತರ ಸಮುದಾಯಗಳಿಗಾಗಿ ಕೆಲವು ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಉಳಿದವು ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿವೆ ಎಂದು Deccan Herald ವರದಿ ಮಾಡಿದೆ.
ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ ಎನ್ ಈ ಕುರಿತು ಮಾತನಾಡಿದ್ದು, ನೀರಿಲ್ಲದ ರೈತರು ಮತ್ತು ಸಮುದಾಯಗಳು ಎದುರಿಸುತ್ತಿರುವ ಭೀಕರ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು, ಅಂತರ್ಜಲವನ್ನು ಸುಧಾರಿಸುವುದು ಮತ್ತು ಪ್ರವಾಹ ತಗ್ಗಿಸುವ ಕಾರ್ಯಗಳು ಕೆಎನ್ಎನ್ಎಲ್ನ ಕಾರ್ಯದ ಕೇಂದ್ರಬಿಂದುವಾಗಿರಬೇಕು. ಆದರೆ ಮತಬ್ಯಾಂಕ್ ರಾಜಕಾರಣಕ್ಕಾಗಿ ʼನೀರಾವರಿಗೆ ಸಂಬಂಧಿಸದʼ ಕಾಮಗಾರಿಗಳಿಗೆ ಹಿಂಬಾಗಿಲ ಮೂಲಕ ಅನುದಾನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ತುಂಗಾ ಯೋಜನೆಯ ಮುಖ್ಯ ಎಂಜಿನಿಯರ್ ಶಿವಾನಂದ್ ಎಸ್ ಬಣಕಾರ ಅವರಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿ ಕಚೇರಿಯಿಂದ ಕಳುಹಿಸಲಾದ ದೂರನ್ನು ನಾವು ಸ್ವೀಕರಿಸಿದ್ದೇವೆ. ವಿಚಾರಣೆ ನಂತರ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿರುವ ಬಗ್ಗೆ Deccan Herald ವರದಿ ಮಾಡಿದೆ.
ಕೆಎನ್ಎನ್ಎಲ್ನ ಬೆಂಗಳೂರು ಕಚೇರಿಯ ಹಿರಿಯ ಅಧಿಕಾರಿಯೊಬ್ಬರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಫೆಬ್ರವರಿ ಮತ್ತು ಮಾರ್ಚ್ 2023ರಲ್ಲಿ ಅನುಮೋದಿಸಲಾದ ಕೆಲವು ಕಾಮಗಾರಿಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಅದಕ್ಕಿಂತ ಮೊದಲು ಅನುಮೋದಿಸಲಾದ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ.
ಈ ಹಿಂದೆ ನಿಗಮದಲ್ಲಿ ಕೆಲಸಮಾಡಿದ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡುತ್ತಾ, ಮೂಲ ಸೌಕರ್ಯಗಳು ಮತ್ತು ಪುನರ್ವಸತಿ ಕಾರ್ಯಗಳಿಗೆ ಬಜೆಟ್ ನಲ್ಲಿ ಅನುಮೋದನೆಗಳನ್ನು ನೀಡಲಾಗಿದೆ. ಬಜೆಟ್ ಅನುಮೋದನೆಗಳನ್ನು ಅನುಸರಿಸಬೇಕು. ಆದರೆ ಅಸ್ಪಷ್ಟ ಮತ್ತು ಸಂಬಂಧವಿಲ್ಲದ ಯೋಜನೆಗಳಿಗೆ ಅನುಮೋದನೆಗಳನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರದ ಮುಖ್ಯಸ್ಥರು ಮಂಡಳಿಯ ಮುಖ್ಯಸ್ಥರೂ ಆಗಿರುವುದರಿಂದ ಯಾವುದೇ ಆಕ್ಷೇಪಣೆಯಿಲ್ಲದೆ ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಹೇಳಿದ್ದಾರೆ.