ಜಾತಿಗಣತಿ, ಆರ್ಥಿಕ ಸಮೀಕ್ಷೆ ಶೇ.50ರ ಮೀಸಲಾತಿ ಮಿತಿಯನ್ನು ತೆಗೆದುಹಾಕಲಿವೆ : ರಾಹುಲ್ ಗಾಂಧಿ
ರಾಹುಲ್ ಗಾಂಧಿ | Photo: @RahulGandhi
ಹೊಸದಿಲ್ಲಿ: ಅಧಿಕಾರಕ್ಕೆ ಬಂದರೆ ಜಾತಿಗಣತಿಯನ್ನು ನಡೆಸುವ ತನ್ನ ಪಕ್ಷದ ಸಂಕಲ್ಪಕ್ಕೆ ಒತ್ತು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಆರ್ಥಿಕ ಸಮೀಕ್ಷೆಯ ಜೊತೆಗೆ ಈ ಸರಿಯಾದ ಹೆಜ್ಜೆಯ ಆಧಾರದಲ್ಲಿ ಮೀಸಲಾತಿಯ ಮೇಲಿನ ಶೇ.50ರ ಮಿತಿಯು ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಪ್ರತಿಪಾದಿಸಿದ್ದಾರೆ.
‘ಕೌಂಟ್ (ಎಣಿಕೆ)’ ಕಾಂಗ್ರೆಸ್ ನ ಘೋಷಣೆಯಾಗಿದೆ. ಏಕೆಂದರೆ ಅದು ನ್ಯಾಯದತ್ತ ಮೊದಲ ಹೆಜ್ಜೆಯಾಗಿದೆ ಎಂದು ಶನಿವಾರ ತನ್ನ ಎಕ್ಸ್ ಪೋಸ್ಟ್ನಲ್ಲಿ ಹೇಳಿರುವ ರಾಹುಲ್, ‘ಯಾರು ಬಡವರು ಎಂದು ನಾವೆಂದಾದರೂ ಯೋಚಿಸಿದ್ದೇವೆಯೇ? ಎಷ್ಟು ಬಡವರಿದ್ದಾರೆ ಮತ್ತು ಯಾವ ಸ್ಥಿತಿಯಲ್ಲಿದ್ದಾರೆ? ಇವೆಲ್ಲವನ್ನೂ ಲೆಕ್ಕ ಹಾಕುವ ಅಗತ್ಯವಿಲ್ಲವೇ ’ ಎಂದು ಪ್ರಶ್ನಿಸಿದ್ದಾರೆ. ಬಿಹಾರದಲ್ಲಿ ನಡೆಸಲಾದ ಜಾತಿಗಣತಿಯು ಜನಸಂಖ್ಯೆಯ ಶೇ.88ರಷ್ಟು ಭಾಗ ದಲಿತರು, ಬುಡಕಟ್ಟು ಜನರು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಾಗಿದ್ದಾರೆ ಎನ್ನುವುದನ್ನು ಬಹಿರಂಗಗೊಳಿಸಿದೆ ಎಂದು ಅವರು ಹೇಳಿದ್ದಾರೆ.
‘ಬಿಹಾರದ ಅಂಕಿಸಂಖ್ಯೆಗಳು ದೇಶದ ನೈಜ ಚಿತ್ರಣದ ಒಂದು ಕಿರು ನೋಟವಾಗಿದೆ. ದೇಶದಲ್ಲಿಯ ಬಡಜನರು ಯಾವ ಸ್ಥಿತಿಯಲ್ಲಿ ವಾಸವಾಗಿದ್ದಾರೆ ಎಂಬ ಕಲ್ಪನೆಯೂ ನಮಗಿಲ್ಲ. ಇದಕ್ಕಾಗಿಯೇ ನಾವು ಜಾತಿ ಗಣತಿ ಮತ್ತು ಆರ್ಥಿಕ ಸಮೀಕ್ಷೆ ಎಂಬ ಎರಡು ಐತಿಹಾಸಿಕ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಇದರ ಆಧಾರದಲ್ಲಿ ನಾವು ಮೀಸಲಾತಿಯ ಮೇಲಿನ ಶೇ.50ರ ಮಿತಿಯನ್ನು ಕಿತ್ತುಹಾಕುತ್ತೇವೆ. ಈ ಹೆಜ್ಜೆಯು ದೇಶದ ‘ಎಕ್ಸ್ ರೇ’ಅನ್ನು ಮಾಡುತ್ತದೆ ಮತ್ತು ಪ್ರತಿಯೊಬ್ಬರಿಗೂ ಸರಿಯಾದ ಮೀಸಲಾತಿಗಳು,ಹಕ್ಕುಗಳು ಮತ್ತು ಪಾಲನ್ನು ಒದಗಿಸುತ್ತದೆ ’ ಎಂದು ರಾಹುಲ್ ತನ್ನ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
‘ಇದು ಬಡವರಿಗಾಗಿ ಸರಿಯಾದ ನೀತಿಗಳು ಮತ್ತು ಯೋಜನೆಗಳನ್ನು ರೂಪಿಸುವುದರಲ್ಲಿ ನೆರವಾಗುವುದು ಮಾತ್ರವಲ್ಲ,ಶಿಕ್ಷಣ,ಸಂಪಾದನೆ ಮತ್ತು ಔಷಧಿಗಳಿಗಾಗಿ ಹೋರಾಟದಿಂದ ಅವರನ್ನು ರಕ್ಷಿಸಲೂ ನೆರವಾಗುತ್ತದೆ ಮತ್ತು ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುತ್ತದೆ ’ ಎಂದಿರುವ ರಾಹುಲ್, ’ಹೀಗಾಗಿ ನೀವು ಎಚ್ಚೆತ್ತುಕೊಂಡು ನಿಮ್ಮ ಧ್ವನಿಯನ್ನು ಎತ್ತಬೇಕಿದೆ. ಜಾತಿಗಣತಿ ನಿಮ್ಮ ಹಕ್ಕು ಮತ್ತು ಅದು ನಿಮ್ಮನ್ನು ಸಂಕಷ್ಟಗಳ ಕತ್ತಲೆಯಿಂದ ಬೆಳಕಿನತ್ತ ಒಯ್ಯುತ್ತದೆ ’ ಎಂದಿದ್ದಾರೆ.