ಕೇರಳದ ದೇವಸ್ಥಾನದಲ್ಲಿ ಈಳವ ಉದ್ಯೋಗಿ ವಿರುದ್ಧ ಜಾತಿ ತಾರತಮ್ಯ?
►‘ಕಳಕ್ಕಮ್’ ನೇಮಕಾತಿಯಲ್ಲಿ ಜಾತಿ ಪರಿಗಣಿಸಿ ಎಂದ ತಂತ್ರಿಗಳು ►ಸಾಧ್ಯವಿಲ್ಲ ಎಂದ ಕೇರಳ ದೇವಸ್ವಮ್ ನೇಮಕಾತಿ ಮಂಡಳಿ

ತ್ರಿಶೂರ್: ಪ್ರಸಿದ್ಧ ಕೂಡಲ್‌ಮಾಣಿಕ್ಯಮ್ ದೇವಸ್ಥಾನಕ್ಕೆ ‘ಕಳಕ್ಕಮ್’ನನ್ನು ನೇಮಿಸುವಾಗ ಜಾತಿಯನ್ನು ಪರಿಗಣಿಸಬೇಕು ಎಂಬ ಬೇಡಿಕೆಯನ್ನು ‘ತಂತ್ರಿ’ಗಳು ಮುಂದಿಟ್ಟಿದ್ದಾರೆ, ಆದರೆ ಆ ಬೇಡಿಕೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೇರಳ ದೇವಸ್ವಮ್ ನೇಮಕಾತಿ ಮಂಡಳಿಯ ಅಧ್ಯಕ್ಷ ಕೆ.ಬಿ. ಮೋಹನ್‌ದಾಸ್ ಮಂಗಳವಾರ ಹೇಳಿದ್ದಾರೆ.
ಕಾನೂನಿಗೆ ಅನುಗುಣವಾಗಿ ಸಮುದಾಯ ಮೀಸಲಾತಿಗಳನ್ನು ಮಾತ್ರ ಜಾರಿಗೊಳಿಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು.
ಇತ್ತೀಚೆಗೆ ರಾಜೀನಾಮೆ ನೀಡಿರುವ ಉದ್ಯೋಗಿಯ ನೇಮಕಾತಿಯನ್ನು ಸಾಮಾನ್ಯ ವಿಭಾಗದಿಂದ ಮಾಡಲಾಗಿತ್ತು ಎಂದು ಹೇಳಿದ ಸರಕಾರಿ ನೇಮಕಾತಿ ಮಂಡಳಿಯ ಮುಖ್ಯಸ್ಥರು, ಮುಂದಿನ ನೇಮಕಾತಿಯನ್ನು ಸಮುದಾಯ ಮೀಸಲಾತಿ ವಿಭಾಗದಿಂದ ಮಾಡಲಾಗುವುದು ಎಂದು ತಿಳಿಸಿದರು.
ದೇವಸ್ಥಾನದ ‘ಕಳಕ್ಕಮ್’ ಉದ್ಯೋಗಿಯೊಬ್ಬರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ, ನೂತನ ಕಳಕ್ಕಮ್ ನೇಮಕಾತಿಗಾಗಿ ವಿಧಿವಿಧಾನಗಳನ್ನು ಮಂಡಳಿಯು ಆರಂಭಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದೇವಸ್ವಮ್ ನೇಮಕಾತಿ ಮಂಡಳಿಯ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ.
‘‘ದೇವಸ್ವಮ್ ಮಂಡಳಿಯು ನೇಮಕಾತಿ ಆದೇಶವನ್ನು ಶೀಘ್ರವೇ ಹೊರಡಿಸಲಿದೆ. ವಿಳಂಬಕ್ಕೆ ಯಾವುದೇ ಕಾರಣವಿಲ್ಲ’’ ಎಂದು ಮೋಹನ್ ದಾಸ್ ಹೇಳಿದರು.
ಕಳಕ್ಕಮ್ ಎನ್ನುವುದು ದೇವಸ್ಥಾನದ ಒಳಗೆ ಹೂವಿನ ಮಾಲೆಗಳನ್ನು ತಯಾರಿಸುವ ಮತ್ತು ಇತರ ಸಾಂಪ್ರದಾಯಿಕ ಕೆಲಸಗಳನ್ನು ನಿರ್ವಹಿಸುವ ಹುದ್ದೆಯಾಗಿದೆ.
ಕಳಕ್ಕಾರನ್ ಮತ್ತು ಕೀಳ್ ಶಾಂತಿ ಹುದ್ದೆಗಳ ನೇಮಕಗಳಿಗೆ ಸಂಬಂಧಿಸಿ ದೇವಸ್ಥಾನದ ತಂತ್ರಿ ನನಗೆ ಒಂದು ಪತ್ರವನ್ನು ಕಳುಹಿಸಿದ್ದಾರೆ ಎಂದು ಮೋಹನ್ ದಾಸ್ ಹೇಳಿದರು. ಈ ನೇಮಕಾತಿಗಳ ಸಂದರ್ಶನ ಪ್ರಕ್ರಿಯೆಗಳಲ್ಲಿ ತನ್ನನ್ನೂ ಸೇರಿಸಿಕೊಳ್ಳಬೇಕು ಎಂಬುದಾಗಿ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ ಎಂದರು.
ಈ ನಡುವೆ, ವಾರಿಯರ್ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆ ಕೇರಳ ವಾರಿಯರ್ ಸಮಾಜಮ್ ನ ಪದಾಧಿಕಾರಿಗಳು ಈ ಹುದ್ದೆಯನ್ನು ತಮಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಹೋಗುವ ಆಯ್ಕೆಯೂ ತಮ್ಮ ಮುಂದಿದೆ ಎಂದು ಅವರು ಹೇಳಿದ್ದಾರೆ.
ದೇವಸ್ಥಾನಗಳಲ್ಲಿ ಕಳಕ್ಕಮ್ ಕೆಲಸವನ್ನು ಸಾಂಪ್ರದಾಯಿಕವಾಗಿ ವಾರಿಯರ್ ಸಮುದಾಯದ ಸದಸ್ಯರು ನೆರವೇರಿಸುತ್ತಾ ಬಂದಿದ್ದಾರೆ.
►ದೇವಸ್ವಮ್ ಮಂಡಳಿಗೆ ತಂತ್ರಿಗಳಿಂದ ಬೆದರಿಕೆ
ಬಾಲು ಇತ್ತೀಚೆಗೆ ‘ಕಳಕ್ಕಮ್’ ಹುದ್ದೆಯನ್ನು ವಹಿಸಿಕೊಳ್ಳಲು ದೇವಸ್ಥಾನಕ್ಕೆ ಹೋಗಿದ್ದರು. ಆದರೆ, ಈ ಹುದ್ದೆಯನ್ನು ವಹಿಸಲು ಅವರಿಗೆ ಅವಕಾಶ ನೀಡಿದರೆ ನಮ್ಮ ಕರ್ತವ್ಯಗಳನ್ನು ನಾವು ನಿರ್ವಹಿಸುವುದಿಲ್ಲ ಎಂಬ ಬೆದರಿಕೆಯನ್ನು ತಂತ್ರಿಗಳು ದೇವಸ್ವಮ್ ಮಂಡಳಿಗೆ ಒಡ್ಡಿದರು.
ಈ ಹಿನ್ನೆಲೆಯಲ್ಲಿ, ದೇವಸ್ವಮ್ ಮಂಡಳಿಯ ಅಧಿಕಾರಿಗಳು ಬಾಲುರನ್ನು ತಾತ್ಕಾಲಿಕವಾಗಿ ದೇವಸ್ಥಾನದ ಕಚೇರಿ ಕೆಲಸಕ್ಕೆ ನಿಯೋಜಿಸಿದರು.
ಆದರೆ, ರಾಜ್ಯ ಸರಕಾರವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಕಾನೂನುಗಳಿಗೆ ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ನೇಮಕಗೊಂಡಿರುವ ಹಿಂದುಳಿದ ಸಮುದಾಯದ ವ್ಯಕ್ತಿಗೆ ದೇವಸ್ಥಾನದಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಸರಕಾರ ಸ್ಪಷ್ಟವಾಗಿ ಹೇಳಿತು.
► ಕಳಕ್ಕಮ್ ಕೆಲಸ ನಿರ್ವಹಣೆಗೆ ಅಡ್ಡಗಾಲು; ಉದ್ಯೋಗಿ ರಾಜೀನಾಮೆ
‘ಕಳಕ್ಕಮ್’ ಕರ್ತವ್ಯ ನಿರ್ವಹಿಸಲು ದೇವಸ್ವಮ್ ನೇಮಕಾತಿ ಮಂಡಳಿಯಿಂದ ನೇಮಕಗೊಂಡಿದ್ದ ಈಳವ ಸಮುದಾಯದ ಬಾಲು ಕಳೆದ ವಾರ ರಾಜೀನಾಮೆ ನೀಡಿದ್ದರು. ಅವರ ವಿರುದ್ಧ ಜಾತಿ ತಾರತಮ್ಯ ಮಾಡಲಾಗುತ್ತಿತ್ತು ಎಂಬ ಆರೋಪಗಳಿವೆ.
ಈಳವ ಸಮುದಾಯದ ವ್ಯಕ್ತಿಯು ರಾಜೀನಾಮೆ ನೀಡಿದ ಬಳಿಕ, ಕೇರಳದ ದೇವಸ್ಥಾನಗಳಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
ಆದರೆ, ಮುಂದಿನ ನೇಮಕಾತಿಯನ್ನು ಈಳವ ಸಮುದಾಯದಿಂದಲೇ ಮಾಡಲಾಗುವುದು ಎಂಬುದಾಗಿ ಮೂಲಗಳು ತಿಳಿಸಿವೆ.
ದೇವಸ್ಥಾನದ ಆಡಳಿತಾಧಿಕಾರಿಯು ದೇವಸ್ವಮ್ ಆಡಳಿತ ಸಮಿತಿಯ ಗಮನಕ್ಕೂ ತಾರದೆ ಬಾಲು ಅವರನ್ನು ಕಚೇರಿಯ ಕೆಲಸಕ್ಕೆ ನಿಯೋಜಿಸಿದ್ದರು ಎಂದು ಮೊಹನ್ ದಾಸ್ ಹೇಳಿದರು.