ದೇವಸ್ಥಾನದ ಅರ್ಚಕರ ನೇಮಕಾತಿಯಲ್ಲಿ ಜಾತಿಗೆ ಪಾತ್ರವಿಲ್ಲ: ಮದ್ರಾಸ್ ಹೈಕೋರ್ಟ್ ತೀರ್ಪು
ಸಾಂದರ್ಭಿಕ ಚಿತ್ರ
ಚೆನ್ನೈ: ಅರ್ಚಕರ ನೇಮಕಾತಿಯಲ್ಲಿ ಜಾತಿಗೆ ಯಾವುದೇ ಪಾತ್ರವಿಲ್ಲ ಎಂದು ಮಹತ್ವದ ತೀರ್ಪಿನಲ್ಲಿ ಮದ್ರಾಸ್ ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ಅಭ್ಯರ್ಥಿಯು ಜಾತಿಯೊಂದನ್ನು ಹೊರತುಪಡಿಸಿ, ಇತರ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ, ಅಂದರೆ ಅಗತ್ಯ ಬೇಕಾದ ಜ್ಞಾನವನ್ನು ಹೊಂದಿದ್ದರೆ, ಸರಿಯಾದ ತರಬೇತಿ ಪಡೆದಿದ್ದರೆ ಮತ್ತು ಸಂಬಂಧಿತ ದೇವಸ್ಥಾನಕ್ಕೆ ಅನ್ವಯವಾಗುವ ಆಗಮ ಶಾಸ್ತ್ರದಡಿ ಪೂಜೆಗಳನ್ನು ಮತ್ತು ಇತರ ವಿಧಿವಿಧಾನಗಳನ್ನು ನಡೆಸುವ ಅರ್ಹತೆ ಹೊಂದಿದ್ದರೆ, ಅರ್ಚಕನಾಗಿ ಅವರ ನೇಮಕಾತಿಗೆ ಜಾತಿ ಅಡ್ಡಬರುವುದಿಲ್ಲ ಎಂದು ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ತೀರ್ಪು ನೀಡಿದ್ದಾರೆ.
2018ರಲ್ಲಿ ಮುತ್ತು ಸುಬ್ರಮಣ್ಯ ಗುರುಕುಲ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ. ಅರ್ಚಕರ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವಂತೆ ಕೋರಿ ಸೇಲಮ್ನ ಶ್ರೀ ಸುಗವನೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ದೇವಸ್ಥಾನ ಅನುಸರಿಸುತ್ತಿರುವ ಆಗಮಕ್ಕೆ ಅನುಸಾರವಾಗಿ ಮಾತ್ರ ನೇಮಕಾತಿಗಳನ್ನು ಮಾಡಬೇಕು ಎಂದು ಅರ್ಜಿದಾರರು ವಾದಿಸಿದ್ದರು.
ರಿಟ್ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ನ ಮೊದಲ ವಿಭಾಗ ಪೀಠವು, ರಾಜ್ಯದಲ್ಲಿರುವ ಆಗಮಿಕ ಮತ್ತು ಅಗಮಿಕವಲ್ಲದ ದೇವಸ್ಥಾನಗಳನ್ನು ಗುರುತಿಸಲು 2022ರಲ್ಲಿ ಮದರಾಸು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶಎಮ್. ಚೋಕಲಿಂಗಮ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು.
ಹಾಗಾಗಿ, ನ್ಯಾಯಾಲಯದಿಂದ ನೇಮಕಗೊಂಡಿರುವ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಎಲ್ಲಾ ದೇವಸ್ಥಾನಗಳು ಅರ್ಚಕರ ನೇಮಕಾತಿಯನ್ನು ಮುಂದೂಡಬೇಕೇ ಎಂಬ ಪ್ರಶ್ನೆ ನ್ಯಾ. ವೆಂಕಟೇಶ್ ಮುಂದೆ ಬಂತು.
ಈ ಪ್ರಶ್ನೆಗೆ ಉತ್ತರಿಸಿದ ನ್ಯಾಯಾಧೀಶರು, ದೇವಸ್ಥಾಶನವು ಯಾವ ಆಗಮವನ್ನು ಅನುಸರಿಸುತ್ತದೆ ಎಂಬ ಬಗ್ಗೆ ಗೊಂದಲವಿಲ್ಲದಿದ್ದರೆ, ಸಮಿತಿಯು ತನ್ನ ವರದಿಯನ್ನು ಸಲ್ಲಿಸುವ ಮೊದಲೇ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ನೇಮಕಗೊಂಡ ದೇವಸ್ಥಾನ ಟ್ರಸ್ಟಿಗಳು ಮತ್ತು ‘‘ಯೋಗ್ಯ ವ್ಯಕ್ತಿಗಳು’’ ಅರ್ಚಕರನ್ನು ನೇಮಿಸಲು ಯಾವುದೇ ತಡೆಯಿಲ್ಲ ಎಂದು ಹೇಳಿದರು.
ಸುಗವನೇಶ್ವರ ಸ್ವಾಮಿ ದೇವಸ್ಥಾನದಲ್ಲೂ, ನೇಮಕಾತಿ ಪ್ರಕ್ರಿಯೆಗೆ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ. ಅಭ್ಯರ್ಥಿಯ ಆಯ್ಕೆಯಲ್ಲಿ ಅರ್ಜಿದಾರರೂ ಭಾಗವಹಿಸಬಹುದು ಎಂದು ಅವರು ಹೇಳಿದ್ದಾರೆ.