ಜಾತಿ ಮೀಸಲಾತಿ ಶೇ.50ರಿಂದ ಶೇ.65ಕ್ಕೆ ಏರಿಕೆ
ಬಿಹಾರ ವಿಧಾನಭೆಯಲ್ಲಿ ಮಸೂದೆ ಅಂಗೀಕಾರ
Photo- PTI
ಪಾಟ್ನಾ: ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿಗಳು (ಎಸ್ಸಿ), ಪರಿಶಿಷ್ಟ ಪಂಗಡಗಳು (ಎಸ್ಟಿ),ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಮೀಸಲಾತಿಯನ್ನು ಈಗಿನ ಶೇ.50ರಿಂದ ಶೇ.65ಕ್ಕೆ ಹೆಚ್ಚಿಸುವ ಮಸೂದೆಯನ್ನು ಬಿಹಾರ ವಿಧಾನಸಭೆಯು ಗುರುವಾರ ಅನುಮೋದಿಸಿತು.
ನಿತೀಶ್ ಕುಮಾರ್ ಸರಕಾರವು ನಡೆಸಿದ್ದ ಸಮಗ್ರ ಜಾತಿ ಗಣತಿಯ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಮಸೂದೆಯನ್ನು ಸದನವು ಧ್ವನಿಮತದ ಮೂಲಕ ಸರ್ವಾನುಮತದಿಂದ ಅಂಗೀಕರಿಸಿತು.
ಮಸೂದೆಯ ಪ್ರಕಾರ ಮೀಸಲಾತಿಯು ಎಸ್ಟಿಗಳಿಗೆ ಶೇ.1ರಿಂದ ಶೇ.2ಕ್ಕೆ ಮತ್ತು ಎಸ್ಸಿಗಳಿಗೆ ಶೇ.16ರಿಂದ ಶೇ.20ಕ್ಕೆ ಹೆಚ್ಚಲಿದೆ. ಇಬಿಸಿಗಳಿಗೆ ಶೇ.18ರಿಂದ ಶೇ.25ಕ್ಕೆ ಮತ್ತು ಒಬಿಸಿಗಳಿಗೆ ಶೇ.12ರಿಂದ ಶೇ.15ಕ್ಕೆ ಏರಿಕೆಯಾಗಲಿದೆ.
ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಉದ್ಯೋಗ ಇತ್ಯಾದಿಗಳಲ್ಲಿ ಮೀಸಲಾತಿಯನ್ನು ಶೇ.50ಕ್ಕೆ ಸೀಮಿತಗೊಳಿಸಿತ್ತು.
ಬಿಹಾರದಲ್ಲಿ ಸುಮಾರು ಶೇ.34ರಷ್ಟು ಕುಟುಂಬಗಳು ಮಾಸಿಕ 6,000 ರೂ. ಅಥವಾ ಅದಕ್ಕೂ ಕಡಿಮೆ ಆದಾಯದಲ್ಲಿ ದಿನಗಳನ್ನು ದೂಡುತ್ತಿದ್ದರೆ,ಇದೇ ಆದಾಯವನ್ನು ಹೊಂದಿರುವ ಎಸ್ಸಿ/ಎಸ್ಟಿಗಳ ಕುಟುಂಬಗಳ ಪ್ರಮಾಣ ಸುಮಾರು ಶೇ.43ರಷ್ಟಿದೆ. ಶೇ.30ರಷ್ಟು ಕುಟುಂಬಗಳು ಮಾಸಿಕ 6,000 ರೂ.ಗಳಿಂದ 10,000 ರೂ.ಗಳ ಆದಾಯ ಹೊಂದಿವೆ.
ಬಿಹಾರದಲ್ಲಿ ಮಾಸಿಕ ಆದಾಯ 10,000 ರೂ.ಕ್ಕೂ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಪ್ರಮಾಣ ಈಗ ಶೇ.63ನ್ನು ಮೀರಿದೆ ಎಂದು ಸಂಚಿತ ದತ್ತಾಂಶಗಳು ಬೆಟ್ಟು ಮಾಡಿವೆ.
ಪ್ರಸಕ್ತ ವರ್ಷಕ್ಕಾಗಿ ಇತರ ರಾಜ್ಯಗಳಲ್ಲಿಯ ಕುಟುಂಬ ಆದಾಯಗಳ ಹೋಲಿಸಬಹುದಾದ ದತ್ತಾಂಶಗಳು ಸದ್ಯಕ್ಕೆ ಲಭ್ಯವಿಲ್ಲದಿದ್ದರೂ, 2022-23ರ ಆರ್ಥಿಕ ಸಮೀಕ್ಷೆಯ ವರದಿಯಲ್ಲಿನ ಅಂಕಿಅಂಶಗಳು ಬಿಹಾರವು ದೇಶದಲ್ಲಿ ಕನಿಷ್ಠ ತಲಾದಾಯ (49,470 ರೂ.) ಹೊಂದಿರುವ ರಾಜ್ಯವಾಗಿದೆ ಎನ್ನುವುದನ್ನು ತೋರಿಸಿವೆ.
ಎಸ್ಸಿ/ಎಸ್ಟಿಗಳ ಪೈಕಿ ಶೇ.42.93ರಷ್ಟು ಎಸ್ಸಿ ಮತ್ತು ಶೇ.42.72ರಷ್ಟು ಎಸ್ಟಿ,ಶೇ.33.16ರಷ್ಟು ಒಬಿಸಿ,ಶೇ.33.58ರಷ್ಟು ಇಬಿಸಿ ಮತ್ತು ಶೇ,25.09ರಷ್ಟು ಸಾಮಾನ್ಯ ವರ್ಗದ ಕುಟುಂಬಗಳು ಬಡತನದಲ್ಲಿ ಬದುಕು ಸಾಗಿಸುತ್ತಿವೆ.
ಸಾಮಾನ್ಯ ವರ್ಗದ ಬಡವರಲ್ಲಿ ಶೇ.27.58ರಷ್ಟು ಭೂಮಿಹಾರರು, ಶೇ.25.3ರಷ್ಟು ಬ್ರಾಹ್ಮಣರು,ಶೇ.24.89ರಷ್ಟು ರಾಜಪೂತರು ಮತ್ತು ಶೇ.13.83ರಷ್ಟು ಕಾಯಸ್ಥರು ಸೇರಿದ್ದಾರೆ. ಮುಸ್ಲಿಮರ ಪೈಕಿ ಶೇ.25.84ರಷ್ಟು ಶೇಖ್,ಶೇ.22.2ರಷ್ಟು ಪಠಾಣ(ಖಾನ್) ಮತ್ತು ಶೇ.17.61ರಷ್ಟು ಸಯ್ಯದಿ ಕುಟುಂಬಗಳು ಬಡತನದಲ್ಲಿ ಬದುಕುತ್ತಿವೆ.
ಶೇ.6,000 ರೂ.ಗೂ ಕಡಿಮೆ ಆದಾಯ ಹೊಂದಿರುವ 94 ಲ.ಬಡ ಕುಟುಂಬಗಳು ಆರ್ಥಿವಾಗಿ ಉತ್ಪಾದಕ ಕೆಲಸಗಳನ್ನು ಕೈಗೊಳ್ಳಲು ಅವುಗಳಿಗೆ ತಲಾ ಎರಡು ಲ.ರೂ.ಗಳ ಹಣಕಾಸು ನೆರವನ್ನು ಒದಗಿಸಲು ತನ್ನ ಸರಕಾರವು ಯೋಜಿಸಿದೆ ಇದರಿಂದ ಸರಕಾರದ ಬೊಕ್ಕಸಕ್ಕೆ 2.51 ಲ.ಕೋ.ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ ಎಂದು ನಿತೀಶ ಮಂಗಳವಾರ ತಿಳಿಸಿದ್ದರು.
ವಸತಿರಹಿತರೆಂದು ಗುರುತಿಸಲಾಗಿರುವ ಪ್ರತಿ ಕುಟುಂಬಕ್ಕೆ ವಾಸಸ್ಥಳ ನಿರ್ಮಾಣಕ್ಕಾಗಿ ಒಂದು ಲ.ರೂ.ಗಳನ್ನು ನೀಡಲಾಗುವುದು ಎಂದೂ ಅವರು ಹೇಳಿದ್ದರು.
ಜಾತಿ-ಆರ್ಥಿಕ ಸಮೀಕ್ಷೆಯ ವರದಿಯಂತೆ ಇಬಿಸಿಗಳ ಉಪವರ್ಗ ಸೇರಿದಂತೆ ಒಬಿಸಿಗಳು ರಾಜ್ಯದ ಜನಸಂಖ್ಯೆಯ ಶೇ.63ರಷ್ಟಿದ್ದರೆ,ಎಸ್ಸಿ ಮತ್ತು ಎಸ್ಟಿಗಳ ಒಟ್ಟು ಪ್ರಮಾಣ ಶೇ.21ಕ್ಕಿಂತ ಕೊಂಚ ಹೆಚ್ಚಿದೆ.