ಸೆ.12ರ ಬಳಿಕ ಕಾವೇರಿ ನೀರು ಬಿಡುಗಡೆ ಸಾಧ್ಯವಾಗದು
ಸುಪ್ರೀಂಕೋರ್ಟ್ಗೆ ಕರ್ನಾಟಕದ ಅಹವಾಲು ► ಕಾವೇರಿ, ಕೃಷ್ಣಾ ನದಿ ತಪ್ಪಲುಗಳಲ್ಲಿ ತೀವ್ರ ಬರ ಪರಿಸ್ಥಿತಿ
Photo: PTI
ಹೊಸದಿಲ್ಲಿ: ಕಾವೇರಿ ಹಾಗೂ ಕೃಷ್ಣಾ ನದಿ ಜಲಾನಯನ ಪ್ರದೇಶಗಳಲ್ಲಿ ತಾನು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವುದರಿಂದ, ಸೆಪ್ಟೆಂಬರ್ 12ರ ಆನಂತರ ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ತಮಿಳುನಾಡಿಗೆ ಬಿಡುಗಡೆಗೊಳಿಸಲು ಸಾಧ್ಯವಾಗದು ಎಂದು ಕರ್ನಾಟಕ ಸರಕಾರವು ಸುಪ್ರೀಂಕೋರ್ಟ್ಗೆ ತಿಳಿಸಿದೆ.
ತಾನು ಎದುರಿಸುತ್ತಿರುವ ನೀರಿನ ಸಮಸ್ಯೆಗಳಿಗೆ ತಮಿಳುನಾಡು ಕಾರಣವೆಂದು ಕರ್ನಾಟಕ ಸರಕಾರ ಆರೋಪಿಸಿದೆ. ಆದರೂ, ಸೆಪ್ಟೆಂಬರ್ 12ರವರೆಗೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರನ್ನು ತಾನು ಬಿಡುಗಡೆಗೊಳಿಸಬೇಕೆಂಬ ಕೇಂದ್ರ ಜಲ ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಪ್ರಾಧಿಕಾರದ ನಿರ್ದೇಶನಕ್ಕೆ ಬದ್ಧವಾಗಿ ನಡೆದುಕೊಳ್ಳುವುದಾಗಿ ಕರ್ನಾಟಕ ಸರಕಾರ ಭರವಸೆ ನೀಡಿದೆ. ಬರಪರಿಸ್ಥಿತಿಯು ಕರ್ನಾಟಕಕ್ಕೆ ಅತಿ ದೊಡ್ಡ ಹೊರೆಯಾಗಿ ಪರಿಣಮಿಸಿದೆ ಎಂದು ಅದು ಹೇಳಿದೆ.
ಈ ಸಂಬಂಧ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿರುವ ರಾಜ್ಯ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು,‘‘ಪ್ರಸಕ್ತ ಕಾವೇರಿ ತಪ್ಪಲಿನ ನಾಲ್ಕು ಜಲಾಶಯಗಳಲ್ಲಿ ಸದ್ಯ 56.043 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಸುಮಾರು 40 ಟಿಎಂಸಿ ನೀರು ಹರಿದುಬರಬಹುದು ಎಂದು ಅಂದಾಜಿಸಲಾಗಿದೆ.
ಋತುವಿನ ಉಳಿದ ಅವಧಿಯಲ್ಲಿ ನಗರಗಳು, ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ಹಾಗೂ ರೈತರ ಬೆಳೆಗಳಿಗೆ ಕರ್ನಾಟಕಕ್ಕೆ 140 ಟಿಎಂಸಿ ನೀರಿನ ಅಗತ್ಯವಿದೆ. ಈ ವಿಷಯವನ್ನು ಸಿಡಬ್ಲ್ಯುಎಂಎ ನ ಗಮನಕ್ಕೆ ಈಗಾಗಲೇ ತರಲಾಗಿದೆ. ಆದುದರಿಂದ ಸೆಪ್ಟೆಂಬರ್ 12ರ ಆನಂತರ ರಾಜ್ಯದ ಯಾವುದೇ ಜಲಾಶಯಗಳಿಂದ ನೀರನ್ನು ಬಿಡುಗಡೆಗೊಳಿಸಲು ಕಾರ್ಯಸಾಧ್ಯವಾಗದು’’ ಎಂದು ಕರ್ನಾಟಕವು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ.
ಆಗಸ್ಟ್ 29ರಿಂದ ಸೆಪ್ಟೆಂಬರ್ 3ರ ನಡುವೆ ಕಳೆದ ಆರು ದಿನಗಳ ಕಾಲ ತಾನು ನಿಗದಿತ 30 ಸಾವಿರ ಕ್ಯೂಸೆಕ್ಗಳ ಬದಲಿಗೆ 37,869 ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸಲಾಗಿದೆ. ಆದುದರಿಂದ ಹೆಚ್ಚುವರಿಯಾಗಿ ಬಿಡುಗಡೆಗೊಳಿಸಿದ್ದ 7,869 ಕ್ಯೂಸೆಕ್ ನೀರನ್ನು ಮುಂಬರುವ ದಿನಗಳಲ್ಲಿ ಹೊಂದಿಸಿಕೊಳ್ಳುವ ಹಕ್ಕನ್ನು ತಾನು ಕಾಯ್ದುಕೊಂಡಿರುವುದಾಗಿ ಕರ್ನಾಟಕ ಹೇಳಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆಯು ವಾಡಿಕೆಗಿಂತ 60.12 ಶೇ.ಕ್ಕಿಂತಲೂ ಅಧಿಕವಾಗಿದೆ. ಕರ್ನಾಟಕ ಹಾಗೂ ಅಂತರ್ ರಾಜ್ಯ ಗಡಿಗಳಲ್ಲಿರುವ ಜಲಾಶಯಗಳಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಕೊರತೆಯು 66 ಶೇ.ಕ್ಕಿಂತಲೂ ಅಧಿಕವಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಪ್ರತಿ ದಿನ 24 ಸಾವಿರ ಕ್ಯೂಸೆಕ್ ನೀರನ್ನು ಪೂರೈಕೆ ಮಾಡಬೇಕೆಂಬ ತಮಿಳುನಾಡಿನ ಬೇಡಿಕೆಯು ಸಂಪೂರ್ಣವಾಗಿ ಅಸಮರ್ಥನೀಯ ಹಾಗೂ 2023-24 ಜಲ ವರ್ಷದಲ್ಲಿ ಸಹಜ ಮಳೆ ಪರಿಸ್ಥಿತಿಯಿದ್ದ ಸನ್ನಿವೇಶವನ್ನು ಆಧರಿಸಿದ ತಪ್ಪು ಅಂದಾಜು ಆಗಿದೆ ಎಂದು ಕರ್ನಾಟಕ ತಿಳಿಸಿದೆ.
ಆಗಸ್ಟ್ 14ರಿಂದ ಬಿಳಿಗುಂಡ್ಲು ಜಲಾಶಯದಿಂದ 24 ಸಾವಿರ ಕ್ಯೂಸೆಕ್ ನೀರನ್ನು ಆಗಸ್ಟ್ ತಿಂಗಳ ಉಳಿದ ಅವಧಿಗೆ ಬಿಡುಗಡೆಗೊಳಿಸಬೇಕು ಮತ್ತು ಕಾವೇರಿ ನ್ಯಾಯಾಧಿಕರಣವು ನೀಡಿದ ಆದೇಶದಂತೆ ಸೆಪ್ಟೆಂಬರ್ನಲ್ಲಿ 36.76 ಟಿಎಂಸಿ ನೀರನ್ನು ಬಿಡುಗಡೆಗೊಳಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಲೇರಿತ್ತು.