ಬಾಕಿಯಿರುವ ಕಾವೇರಿ ನೀರಿನ ಬಿಡುಗಡೆಗೆ ತಮಿಳುನಾಡು ಬೇಡಿಕೆಯನ್ನು ತಿರಸ್ಕರಿಸಿದ ಕಾವೇರಿ ಜಲ ನಿಯಂತ್ರಣ ಸಮಿತಿ
ಕಾವೇರಿ ಜಲ | PC : NDTV
ಹೊಸದಿಲ್ಲಿ: ತನಗೆ ಬರಬೇಕಿರುವ ಬಾಕಿಯಿರುವ ನೀರನ್ನು ಬಿಡುಗಡೆ ಮಾಡಲು ಮತ್ತು ರಾಜ್ಯಕ್ಕೆ ಕಾವೇರಿ ನೀರಿನ ನೈಸರ್ಗಿಕ ಹರಿವಿನಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಕಾವೇರಿ ಜಲ ನಿಯಂತ್ರಣ ಸಮಿತಿ(CWRC) ಯು ಗುರುವಾರ ತಿರಸ್ಕರಿಸಿದೆ.
ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡುವಂತೆ ಉಭಯ ರಾಜ್ಯಗಳಿಗೆ ಸಮಿತಿಯು ಆದೇಶಿಸಿದೆ.
ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯು ನದಿ ನೀರನ್ನು ಹಂಚಿಕೊಳ್ಳುವ ರಾಜ್ಯಗಳಲ್ಲಿ ನೀರಿನ ಕೊರತೆಯನ್ನು ನಿವಾರಿಸಿದೆ. ದಿನವೊಂದಕ್ಕೆ ಕೇವಲ 150 ಕ್ಯುಸೆಕ್ಸ್ ನೀರು ಪಡೆಯುತ್ತಿದ್ದ ಅಂತರರಾಜ್ಯ ಗಡಿಯ ಬಿಳಿಗುಂಡ್ಲು ಜಲಾಶಯಕ್ಕೆ ಕಳೆದ ಐದು ದಿನಗಳಿಂದ ಪ್ರತಿದಿನ ಸುಮಾರು 1,100 ಕ್ಯುಸೆಕ್ಸ್ ನೀರು ಹರಿದು ಬರುತ್ತಿದೆ.
ಸಮಿತಿಯ 96ನೇ ಸಭೆಯ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ CWRC ಅಧ್ಯಕ್ಷ ವಿನೀತ ಗುಪ್ತಾ ಅವರು,ಉಭಯ ರಾಜ್ಯಗಳು ತಮ್ಮ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ತಮ್ಮ ಜಲಾಶಯಗಳಲ್ಲಿ ಸಾಕಷ್ಟು ನೀರನ್ನು ಹೊಂದಿವೆ ಎಂದು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯವು ಪರಿಷ್ಕರಿಸಿರುವ ಕಾವೇರಿ ಜಲವಿವಾದಗಳ ನ್ಯಾಯಮಂಡಳಿ (ಸಿಡಬ್ಲ್ಯುಡಿಟಿ)ಯ ಅಂತಿಮ ತೀರ್ಪಿನ ಪ್ರಕಾರ ನೈಸರ್ಗಿಕ ಹರಿವನ್ನು ಕಾಯ್ದುಕೊಳ್ಳುವಂತೆ ಸಮಿತಿಯು ಕರ್ನಾಟಕಕ್ಕೆ ಆದೇಶಿಸಿದೆ.
ಸಿಡಬ್ಲ್ಯುಡಿಟಿ ತೀರ್ಪಿನ ಪ್ರಕಾರ ಕರ್ನಾಟಕವು ಫೆಬ್ರವರಿಯಿಂದ ಮೇವರೆಗೆ ದಿನಕ್ಕೆ ಸುಮಾರು 1,000 ಕ್ಯುಸೆಕ್ಸ್ ನೀರನ್ನು ಬಿಡುಗಡೆಗೊಳಿಸುವ ಮೂಲಕ ಬಿಳಿಗುಂಡ್ಲುವಿನಲ್ಲಿ ನೈಸರ್ಗಿಕ ಹರಿವನ್ನು ಖಚಿತಪಡಿಸಬೇಕು. ಆದಾಗ್ಯೂ ಸಿಡಬ್ಲ್ಯುಡಿಟಿ ತೀರ್ಪು ಸಾಮಾನ್ಯ ವರ್ಷಕ್ಕೆ ಅನ್ವಯವಾಗುತ್ತದೆಯೇ ಹೊರತು 2023-24ರಂತಹ ಬರಪೀಡಿತ ವರ್ಷಕ್ಕಲ್ಲ. ತಮಿಳುನಾಡು ಸಿಡಬ್ಲ್ಯುಆರ್ಸಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಬರಪೀಡಿತ ವರ್ಷಗಳಲ್ಲಿ ನೀರಿನ ಹಂಚಿಕೆಗಾಗಿ ವೈಜ್ಞಾನಿಕ ಸೂತ್ರಕ್ಕಾಗಿ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.
ತಮಿಳು ದೈನಿಕದ ಆರೋಪಗಳನ್ನು ನಿರಾಕರಿಸಿದ ತಮಿಳುನಾಡು ಸರಕಾರ:
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿಯ ಸಭೆಗಳಿಗೆ ಖುದ್ದಾಗಿ ಹಾಜರಾಗದಂತೆ ಮತ್ತು ಆನ್ಲೈನ್ ಮೂಲಕ ಮಾತ್ರ ಹಾಜರಾಗುವಂತೆ ಜಲ ಸಂಪನ್ಮೂಲ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂಬ ಆರೋಪಗಳನ್ನು ತಮಿಳುನಾಡು ಸರಕಾರವು ಗುರುವಾರ ನಿರಾಕರಿಸಿದೆ.
ತಮಿಳು ದೈನಿಕವೊಂದರಲ್ಲಿ ಪ್ರಕಟಗೊಂಡಿರುವ ಸುದ್ದಿ ಸುಳ್ಳು. ಸರಕಾರವು ಇಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಅಧಿಕಾರಿಗಳು ತಪ್ಪದೇ ಸಭೆಗಳಿಗೆ ಹಾಜರಾಗುತ್ತಿದ್ದಾರೆ ಎಂದು ಸರಕಾರಿ ಪ್ರಕಟಣೆಯು ತಿಳಿಸಿದೆ.