ಕಾವೇರಿ ಜಲವಿವಾದ: ಸಿಡಬ್ಲ್ಯುಎಂಎ ನಿರ್ದೇಶದಂತೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ
ಸಾಂದರ್ಭಿಕ ಚಿತ್ರ.| Photo: PTI
ಮೈಸೂರು: ಕಾವೇರಿ ಜಲ ನಿರ್ವಹಣೆ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ನಿರ್ದೇಶಕ್ಕೆ ಅನುಗುಣವಾಗಿ ಕರ್ನಾಟಕವು ಬುಧವಾರ ತನ್ನ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆಯನ್ನು ಆರಂಭಿಸಿದೆ. ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ಎಸ್ ಜಲಾಶಯದಿಂದ ನೀರಿನ ಹೊರಹರಿವನ್ನು ಹೆಚ್ಚಿಸಲಾಗಿದೆ.
ಬುಧವಾರ ಜಲಾಶಯಕ್ಕೆ ನೀರಿನ ಒಳಹರಿವು 2,300 ಕ್ಯುಸೆಕ್ಸ್ ಆಗಿದ್ದರೆ ಹೊರಹರಿವು 4,398 ಕ್ಯುಸೆಕ್ಸ್ ಆಗಿತ್ತು.
ಮಂಗಳವಾರ ರಾತ್ರಿ ಎಂಟು ಗಂಟೆಗೆ ಜಲಾಶಯದಿಂದ ಹೊರಹರಿವು 2,292 ಕ್ಯುಸೆಕ್ಸ್ ಆಗಿತ್ತು,ಆದರೆ 11 ಗಂಟೆಯ ಸುಮಾರಿಗೆ ಅದನ್ನು ಹೆಚ್ಚಿಸಲಾಗಿತ್ತು. ಬುಧವಾರ ಬೆಳಿಗ್ಗೆ ಎಂಟು ಗಂಟೆಗೆ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ 2,000 ಕ್ಯುಸೆಕ್ಸ್ ಆಗಿದ್ದು,ಉಭಯ ಜಲಾಶಯಗಳಿಂದ ಒಟ್ಟು ಹೊರಹರಿವು ಸುಮಾರು 6,398 ಕ್ಯುಸೆಕ್ಸ್ ಆಗುತ್ತದೆ.
ಸೆ,12ರವರೆಗೆ 15 ದಿನಗಳ ಕಾಲ ಕರ್ನಾಟಕ-ತಮಿಳುನಾಡು ಗಡಿಯಲ್ಲಿನ ಬಿಳಿಗೊಂಡ್ಲು ಜಲಾಶಯಕ್ಕೆ ಪ್ರತಿದಿನ 5,000 ಕ್ಯುಸೆಕ್ಸ್ ಕಾವೇರಿ ನೀರನ್ನು ಬಿಡುಗಡೆಗೊಳಿಸುವಂತೆ ಸಿಡಬ್ಲುಎಂಎ ಮಂಗಳವಾರ ಕರ್ನಾಟಕಕ್ಕೆ ನಿರ್ದೇಶ ನೀಡಿತ್ತು.
ಕರ್ನಾಟಕವು ಇದನ್ನು ಬಲವಾಗಿ ವಿರೋಧಿಸಿತ್ತಾದರೂ 5,000 ಕ್ಯುಸೆಕ್ಸ್ ನೀರು ಬಿಡುಗಡೆಗೆ ಕಾವೇರಿ ಜಲ ನಿಯಂತ್ರಣ ಸಮಿತಿಯ ಶಿಫಾರಸುಗಳನ್ನು ಸಿಡಬ್ಲುಎಂಎ ಎತ್ತಿ ಹಿಡಿದಿತ್ತು.
ತಮಿಳುನಾಡಿಗೆ ನೀರನ್ನು ಬಿಡುಗಡೆಗೊಳಿಸಿದರೆ ಪ್ರತಿಭಟನೆಯನ್ನು ಆರಂಭಿಸುವುದಾಗಿ ವಿವಿಧ ರೈತ ಸಂಘಟನೆಗಳು ಬೆದರಿಕೆಯೊಡ್ಡಿವೆ. ಆದರೆ ಸಿಡಬ್ಲುಎಂಎ ನಿರ್ದೇಶನಗಳನ್ನು ಪಾಲಿಸುವ ರಾಜ್ಯ ಸರಲಾರದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯದಿಂದ ಚಾಟಿಯೇಟನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಎಂದು ಪರಿಗಣಿಸಲಾಗಿದೆ. ಕಾವೇರಿ ಜಲ ವಿವಾದವು ಸರ್ವೋಚ್ಚ ನ್ಯಾಯಾಲಯದ ಮುಂದೆಯೂ ಇದೆ ಮತ್ತು ಈ ವಾರದಲ್ಲಿ ವಿಚಾರಣೆಗೆ ಬರಲಿದೆ ಎನ್ನಲಾಗಿದೆ.
ಕೆಆರ್ಎಸ್ ಜಲಾಶಯದ ಪೂರ್ಣ ಮಟ್ಟ 124.80 ಅಡಿಗಳಾಗಿದ್ದು,ಬುಧವಾರ ನೀರಿನ ಮಟ್ಟ 101.58 ಅಡಿ ಇತ್ತು. ಕಳೆದ ವರ್ಷದ ಇದೇ ದಿನ ನೀರಿನ ಮಟ್ಟ 123.92 ಅಡಿ ಇತ್ತು.
ಕೆಆರ್ಎಸ್ ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 49.45 ಟಿಎಂಸಿ ಆಗಿದ್ದು,ಮಂಗಳವಾರ 24.27 ಟಿಎಂಸಿ ನೀರಿತ್ತು. ಕಬಿನಿ ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಆಗಿದ್ದು,ಮಂಗಳವಾರ 13.61 ಟಿಎಂಸಿ ನೀರಿತ್ತು. 15 ದಿನಗಳ ಲಾಲ ಉಭಯ ಜಲಾಶಯಗಳಿಂದ 5,000 ಕ್ಯುಸೆಕ್ಸ್ ನೀರು ಬಿಡುಗಡೆಗೊಳಿಸುವುದರಿಂದ ತಮಿಳುನಾಡಿಗೆ ಸುಮಾರು 6.8 ಟಿಎಂಸಿ ನೀರು ಲಭ್ಯವಾಗುತ್ತದೆ.