ಕಾವೇರಿ ನದಿ ನೀರು ಹಂಚಿಕೆ ವಿವಾದ: ಪ್ರತ್ಯೇಕ ಪೀಠ ರಚನೆಗೆ ಒಪ್ಪಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದ ಪ್ರಕರಣದ ವಿಚಾರಣೆ ನಡೆಸಲು ಪ್ರತ್ಯೇಕ ಪೀಠ ರಚಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ. ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದ ಬೆನ್ನಿಗೇ ಕರ್ನಾಟಕ ಕೂಡ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ನೆರೆಯ ತಮಿಳುನಾಡು ರಾಜ್ಯಕ್ಕೆ ಕಾವೇರಿ ನದಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸುವಂತೆ ರಾಜ್ಯದ ಅಡ್ವಕೇಟ್ ಜನರಲ್ ಅವರಿಗೆ ಕರ್ನಾಟಕ ಸಚಿವ ಸಂಪುಟ ಶನಿವಾರ ಸೂಚಿಸಿತ್ತು. ಕಳೆದ ವಾರ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ರಾಜ್ಯದ ಬೆಳೆಗಳಿಗೆ ನೀರುಣಿಸಲು ಸಹಾಯವಾಗಲು ಪ್ರತಿ ದಿನ 24,000 ಕ್ಯೂಸೆಕ್ಸ್ ನೀರು ಬಿಡುಗಡೆಗೊಳಿಸುವಂತೆ ಕರ್ನಾಟಕಕ್ಕೆ ಸೂಚಿಸಬೇಕೆಂದು ಕೋರಿತ್ತು.
ರಾಜ್ಯದ ಅಗತ್ಯತೆಗಳನ್ನು, ಅಂದರೆ ಕುಡಿಯುವ ಉದ್ದೇಶಕ್ಕೆ ಮತ್ತು ಕಾವೇರಿ ಸುತ್ತಲಿನ ಪ್ರದೇಶದಲ್ಲಿನ ಬೆಳೆಗಳಿಗೆ ನೀರುಣಿಸುವ ಅಗತ್ಯತೆಗಳನ್ನು ಪರಿಗಣಿಸಿ ನಂತರ ತಮಿಳುನಾಡಿಗೆ ನೀರು ಪೂರೈಸುವುದಾಗಿ ಕರ್ನಾಟಕ ಹೇಳಿದೆಯಲ್ಲದೆ ರಾಜ್ಯದಲ್ಲಿ ಮಳೆ ಕೊರತೆಯನ್ನೂ ಉಲ್ಲೇಖಿಸಿದೆ.
ಈ ಹಿನ್ನೆಲೆಯಲ್ಲಿ ವಿವಾದ ಸಂಬಂಧ ವಿಚಾರಣೆ ನಡೆಸಲು ಪೀಠ ರಚಿಸಲು ಸುಪ್ರೀಂ ಕೋರ್ಟ್ ಇಂದು ಒಪ್ಪಿದೆ.
ಜಲ ಸಂಪನ್ಮೂಲ ಸಚಿವಾಲಯವನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಳೆದ ವಾರ ಈ ವಿವಾದ ಕುರಿತು ಪ್ರತಿಕ್ರಿಯಿಸಿ, ಕರ್ನಾಟಕವು ತಮಿಳುನಾಡಿಗೆ 10,000 ಟಿಎಂಸಿ ಅಡಿ ನೀರು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು.
ಆದರೆ ತನ್ನದೇ ಅಗತ್ಯತೆಗಳಿಗೆ ರಾಜ್ಯಕ್ಕೆ ನೀರಿನ ಕೊರತೆಯಿದೆ ಎಂದೂ ಅವರು ತಿಳಿಸಿದ್ದರು.
ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 10,000 ಕ್ಯೂಸೆಕ್ಸ್ ನೀರು ಬಿಡುಗಡೆಗೊಳಿಸಬೇಕೆಂಬ ತನ್ನ ಆದೇಶವನ್ನು ಪರಿಶೀಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಕರ್ನಾಟಕ ಸರ್ಕಾರ ಪತ್ರ ಬರೆದಿರುವ ಕುರಿತು ಶಿವಕುಮಾರ್ ಕಳೆದ ಶುಕ್ರವಾರ ಮಾಹಿತಿ ನೀಡಿದ್ದರು.