ಹಲವು ರಾಜ್ಯಗಳಲ್ಲಿ ಸೈಬರ್ ಕ್ರೈಂ ಜಾಲದ ವಿರುದ್ಧ ಸಿಬಿಐ ದಾಳಿ, 26 ಜನರ ಬಂಧನ
ಸಾಂದರ್ಭಿಕ ಚಿತ್ರ | PC: PTI
ಹೊಸದಿಲ್ಲಿ : ಸಿಬಿಐ ರವಿವಾರ ರಾತ್ರಿ ಸೈಬರ್ ಅಪರಾಧ ಜಾಲದ ವಿರುದ್ಧ ಹಲವು ರಾಜ್ಯಗಳಲ್ಲಿ ದಾಳಿಗಳನ್ನು ನಡೆಸಿದ್ದು, ವಿಶ್ವಾದ್ಯಂತ ಜನರನ್ನು ವಂಚಿಸುತ್ತಿದ್ದ 26 ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಪರೇಷನ್ ಚಕ್ರ- III ರ ಭಾಗವಾಗಿ ಸಿಬಿಐ ತಂಡಗಳು ರವಿವಾರ ತಡರಾತ್ರಿ ಪುಣೆ, ಹೈದರಾಬಾದ್, ಅಹ್ಮದಾಬಾದ್ ಮತ್ತು ವಿಶಾಖಪಟ್ಟಣದ 32 ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿ ಪ್ರಮುಖ ಡಿಜಿಟಲ್ ಸಾಕ್ಷ್ಯಾಧಾರಗಳು ಮತ್ತು ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡಿವೆ.
ಜನರನ್ನು ವಂಚಿಸಲು ಈ ಜಾಲವು ಬಳಸುತ್ತಿದ್ದ ವಿದ್ಯುನ್ಮಾನ ಸಾಧನಗಳು, ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು, ಹಣಕಾಸು ಮಾಹಿತಿ, ಸಂವಹನ ದಾಖಲೆಗಳು ಮತ್ತು ಆಕ್ಷೇಪಾರ್ಹ ವಸ್ತುಗಳು ಸೇರಿದಂತೆ ಸುಮಾರು 951 ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಪುಣೆಯ ವಿಸಿ ಇನ್ಕನ್ಫರ್ಮಿಟಿಸ್ ಪ್ರೈ.ಲಿ.,ವಿಶಾಖಪಟ್ಟಣದ ವಿಸಿ ಇನ್ಫ್ರೊಮೆಟ್ರಿಕ್ಸ್ ಪ್ರೈ.ಲಿ. ಮತ್ತು ಅತ್ರಿಯಾ ಗ್ಲೋಬಲ್ ಸರ್ವಿಸಸ್ ಪ್ರೈ.ಲಿ. ಹಾಗೂ ಹೈದರಾಬಾದ್ನ ವಯಾಜೆಕ್ಸ್ ಸೊಲ್ಯೂಷನ್ಸ್ ; ಈ ನಾಲ್ಕು ಕಾಲ್ಸೆಂಟರ್ಗಳು ಸಿಬಿಐ ಅಧಿಕಾರಿಗಳಿಂದ ದಾಳಿಗೊಳಗಾದ ಸ್ಥಳಗಳಲ್ಲಿ ಸೇರಿವೆ. ಈ ನಾಲ್ಕು ಕಾಲ್ ಸೆಂಟರ್ಗಳಲ್ಲಿ ಲೈವ್ ಆನ್ಲೈನ್ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ 170 ಜನರನ್ನು ತನಿಖಾ ತಂಡಗಳು ಪ್ರತಿಬಂಧಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದರು.
ಈ ಕಾರ್ಯಾಚರಣೆಯ ಗುರಿಯಾಗಿದ್ದ ಸೈಬರ್ ಅಪರಾಧಿಗಳು ಸಂತ್ರಸ್ತರ ಸಿಸ್ಟಮ್ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ನೆಪದಲ್ಲಿ ತಾಂತ್ರಿಕ ತಜ್ಞರ ಸೋಗಿನಲ್ಲಿ ವಿಶೇಷವಾಗಿ ಅಮೆರಿಕದ ಜನರನ್ನು ಸಂಪರ್ಕಿಸುವುದು ಸೇರಿದಂತೆ ಹಲವಾರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂತ್ರಸ್ತರ ಗುರುತುಗಳನ್ನು ಕದಿಯಲಾಗಿದೆ ಮತ್ತು ಅವರ ಬ್ಯಾಂಕ್ ಖಾತೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಅನಧಿಕೃತ ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ಈ ಕ್ರಿಮಿನಲ್ಗಳು ಅವರನ್ನು ನಂಬಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.