ಡಿಎಚ್ಎಫ್ಎಲ್ ವಿರುದ್ಧದ ಮೊಕದ್ದಮೆ ಮುಚ್ಚಿದ ಸಿಬಿಐ

CBI | PC: PTI
ಹೊಸದಿಲ್ಲಿ : 2.60 ಲಕ್ಷ ನಕಲಿ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎನ್ನುವ ಆರೋಪದಲ್ಲಿ ದೀವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್ಎಫ್ಎಲ್) ಮತ್ತು ಅದರ ನಿರ್ದೇಶಕರ ವಿರುದ್ಧ ದಾಖಲಿಸಲಾಗಿದ್ದ ಮೊಕದ್ದಮೆಯನ್ನು ಸಿಬಿಐ ಮುಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2.60 ಲಕ್ಷ ನಕಲಿ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿ, ಅವುಗಳ ಪೈಕಿ ಕೆಲವನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಬ್ಸಿಡಿ ಪಡೆಯಲು ಬಳಸಿರುವ ಆರೋಪವನ್ನು ಡಿಎಚ್ಎಫ್ಎಲ್ ವಿರುದ್ಧ ಹೊರಿಸಲಾಗಿದೆ.
ಮೂರು ವರ್ಷಕ್ಕಿಂತಲೂ ಅಧಿಕ ಕಾಲ ತನಿಖೆ ನಡೆದರೂ, ಇಂಥ ಖಾತೆಗಳ ಸೃಷ್ಟಿಯ ಹಿಂದೆ ಕ್ರಿಮಿನಲ್ ಪಿತೂರಿ ಇದೆ ಎನ್ನುವುದನ್ನು ಸಾಬೀತುಪಡಿಸುವ ಪುರಾವೆಗಳನ್ನು ಪತ್ತೆಹಚ್ಚಲು ಸಿಬಿಐಗೆ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಗರಣ ಪೀಡಿತ ಡಿಎಚ್ಎಫ್ಎಲ್ನ ನೂತನ ಆಡಳಿತ ಮಂಡಳಿ ನೇಮಿಸಿದ ಲೆಕ್ಕಪರಿಶೋಧಕ ಗ್ರಾಂಟ್ ತಾರ್ನ್ಟನ್ ತನ್ನ ವರದಿಯಲ್ಲಿ ಈ ಅವ್ಯವಹಾರಗಳತ್ತ ಬೆಟ್ಟು ಮಾಡಿದ್ದರು.
ಈಗ ಸಿಬಿಐಯು ತನ್ನ ಅಂತಿಮ ವರದಿಯನ್ನು ದಿಲ್ಲಿಯ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಪ್ರಕರಣ ಮುಚ್ಚುವ ವರದಿಯನ್ನು ಸ್ವೀಕರಿಸಬೇಕೇ ಅಥವಾ ಹೆಚ್ಚಿನ ತನಿಖೆಗೆ ಆದೇಶಿಸಬೇಕೇ ಎನ್ನುವ ಬಗ್ಗೆ ನ್ಯಾಯಾಲಯವು ತೀರ್ಮಾನಿಸಲಿದೆ.